ADVERTISEMENT

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ: ತಮಿಳುನಾಡು ತಂಡಕ್ಕೆ ವಿಮಲ್ ಆಸರೆ

ಸತೀಶ ಬಿ.
Published 14 ಅಕ್ಟೋಬರ್ 2024, 21:18 IST
Last Updated 14 ಅಕ್ಟೋಬರ್ 2024, 21:18 IST
ಅರ್ಧಶತಕ (82) ಗಳಿಸಿದ ತಮಿಳುನಾಡು ತಂಡದ ಆರ್.ವಿಮಲ್‌ ಕುಮಾರ್ ಅವರ ಬ್ಯಾಟಿಂಗ್ ವೈಖರಿ
ಪ್ರಜಾವಾಣಿ ಚಿತ್ರ: ಗುರು ಹಬೀಬ
ಅರ್ಧಶತಕ (82) ಗಳಿಸಿದ ತಮಿಳುನಾಡು ತಂಡದ ಆರ್.ವಿಮಲ್‌ ಕುಮಾರ್ ಅವರ ಬ್ಯಾಟಿಂಗ್ ವೈಖರಿ ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ತಾಳ್ಮೆಯ 82 ರನ್ (139 ಎಸೆತ) ಗಳಿಸಿದ ನಾಯಕ ಆರ್.ವಿಮಲ್‌ ಕುಮಾರ್‌ ಅವರು ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಉಪಯುಕ್ತ ಜೊತೆಯಾಟಗಳ ಮೂಲಕ ತಮಿಳುನಾಡು ತಂಡ ಕುಸಿಯದಂತೆ ನೋಡಿಕೊಂಡರು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ ಎರಡನೇ ದಿನದಾಟದ ಅಂತ್ಯಕ್ಕೆ ತಮಿಳುನಾಡು ತಂಡ 49 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಕಲೆ ಹಾಕಿತು.

ಮೈದಾನದ ಹೊರಾಂಗಣ ತೇವಗೊಂಡಿದ್ದ ಕಾರಣ ಭಾನುವಾರ ಮೊದಲ ದಿನದಾಟ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಎರಡನೇ ದಿನವೂ ಹೊರಾಂಗಣ ತೇವವಾಗಿದ್ದು, ಎರಡು ಬಾರಿ ಪರಿಶೀಲನೆಯ ನಂತರ ಮಧ್ಯಾಹ್ನ 1.30ಕ್ಕೆ ಕೊನೆಗೂ ಆಟ ಆರಂಭವಾಯಿತು.

ADVERTISEMENT

ಈ ಟೂರ್ನಿಗೆ ಪ್ರಸಕ್ತ ವರ್ಷ ಜಾರಿಗೆ ತಂದಿರುವ ಹೊಸ ನಿಯಮದ ‍ಪ್ರಕಾರ, ಪ್ರವಾಸಿ ತಂಡವು ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ತಮಿಳುನಾಡು ತಂಡ ಬ್ಯಾಟಿಂಗ್‌ಗೆ ನಿರ್ಧರಿಸಿತು.

ಎಡಗೈ ಬ್ಯಾಟರ್‌ ವಿಮಲ್‌ ಕುಮಾರ್ ಮೊದಲ ವಿಕೆಟ್‌ಗೆ ಅಜಿತೇಶ್‌ ಜಿ. ಜೊತೆ 45 ರನ್ ಸೇರಿಸಿದರು. 24 ಎಸೆತಗಳಲ್ಲಿ 21 ರನ್‌ ಗಳಿಸಿ ಬಿರುಸಿನ ಆಟವಾಡುತ್ತಿದ್ದ ಅಜಿತೇಶ್‌ ರನೌಟ್‌ಗೆ ನಿರ್ಗಮಿಸಬೇಕಾಯಿತು. ವಿಮಲ್‌ ನಂತರ ಎಸ್‌.ಆರ್.ಆತೀಶ್‌ (16) ಜೊತೆ ಎರಡನೇ ವಿಕೆಟ್‌ಗೆ 42 ಸೇರಿಸಿದರು. ಆತೀಶ್‌ (16) ವಿಕೆಟ್ ಕೀಪರ್ ಕೃತಿಕ್ ಕೃಷ್ಣಗೆ ಕ್ಯಾಚಿತ್ತರು.

ನಂತರ ಎಸ್‌.ರಿತಿಕ್‌ ಈಶ್ವರನ್‌ ಜತೆಗೂಡಿದ ವಿಮಲ್‌ ಕುಮಾರ್‌ ತಾಳ್ಮೆಯ ಆಟ ಮುಂದುವರಿಸಿದರು. ಅವರು ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 48 (66ಎ) ರನ್‌ ಗಳಿಸಿದರು. ವಿಮಲ್, ಶಶಿಕುಮಾರ್ ಬೌಲಿಂಗ್‌ನಲ್ಲಿ ಅನೀಶ್ವರ್ ಗೌತಮ್‌ಗೆ ಕ್ಯಾಚಿತ್ತರು. 220 ನಿಮಿಷ ಕ್ರೀಸ್‌ನಲ್ಲಿದ್ದ ಅವರು, 10 ಬೌಂಡರಿ ಬಾರಿಸಿದರು. ಎಸ್.ಮೊಹಮ್ಮದ್ ಅಲಿ (12) ಅವರನ್ನು ಪಾರಸ್‌ ಗುರುಬಕ್ಷ್‌ ಆರ್ಯ ಬೌಲ್ಡ್‌ ಮಾಡಿದರು.

ಎಸ್‌.ರಿತಿಕ್‌ ಈಶ್ವರನ್‌ (22) ಮತ್ತು ಕೆ.ಟಿ.ಎ. ಮಾಧವ ಪ್ರಸಾದ್ (2) ಮಂಗಳವಾರ ಮೂರನೇ ದಿನದಾಟ ಮುಂದುವರಿಸುವರು. ಕರ್ನಾಟಕದ ಪರ ಕೆ.ಶಶಿಕುಮಾರ್‌ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ತಮಿಳುನಾಡು: 49 ಓವರ್‌ಗಳಲ್ಲಿ 4ಕ್ಕೆ 165 (ವಿಮಲ್‌ ಕುಮಾರ್ 82, ಅಜಿತೇಶ್‌ 21, ಆತೀಶ್‌ 16, ಮೊಹಮ್ಮದ್ ಅಲಿ 12,  ರಿತಿಕ್ ಈಶ್ವರನ್ ಬ್ಯಾಟಿಂಗ್‌ 22, ಮಾಧವ ಪ್ರಸಾದ್ ಬ್ಯಾಟಿಂಗ್ 2; ಕೆ.ಶಶಿಕುಮಾರ್ 35ಕ್ಕೆ 2, ಪಾರಸ್ ಗುರುಬಕ್ಷ ಆರ್ಯ 45ಕ್ಕೆ 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.