ಹುಬ್ಬಳ್ಳಿ: ಪರಂಪರಾಗತವಾಗಿ ರೂಢಿಸಿಕೊಂಡು ಬಂದ ಚಿಕಿತ್ಸಾ ವಿಧಾನದಲ್ಲಿ ರಾಜಿ ಮಾಡಿಕೊಳ್ಳದೆ ಗುಣಮಟ್ಟ ಕಾಯ್ದುಕೊಂಡರೆ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಉತ್ತಮ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ ‘ಆಯುರ್ ಎಕ್ಸ್‌ಪೋ 2022’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು ‘ರೋಗ ದಿಢೀರನೇ ವಾಸಿಯಾಗಬೇಕು ಎಂದು ಜನ ಬಯಸುತ್ತಾರೆ. ಆಯುರ್ವೇದ ಚಿಕಿತ್ಸೆ ನೀಡುವವರು ರೋಗಿಗಳ ಆಸೆಗೆ ತಕ್ಕಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗ ಆಯುರ್ವೇದದ ಗುಣಮಟ್ಟ ಕಡಿಮೆಯಾಗುತ್ತಿದೆ. ಸ್ಟಿರಾಯ್ಡ್ ಬಳಕೆ ಹೆಚ್ಚುತ್ತಿದೆ’ ಎಂದರು.
‘ಮನುಷ್ಯ ನಿಸರ್ಗದ ಭಾಗವಾಗಿ ಸರಳ ಜೀವನ ಶೈಲಿ, ಆರೋಗ್ಯಕರ ಬದುಕು ರೂಪಿಸಿಕೊಳ್ಳಬೇಕು. ರೋಗವನ್ನು ಗುಣಪಡಿಸಿಕೊಳ್ಳುವ ನಿರೋಧಕ ಶಕ್ತಿ ನಿಮ್ಮ ದೇಹದಲ್ಲಿದೆ. ರೋಗವನ್ನು ಆಹ್ವಾನಿಸಿಕೊಳ್ಳುವ ಅನಾರೋಗ್ಯಕರ ಜೀವನಶೈಲಿಯೂ ನಿಮ್ಮಲ್ಲಿಯೇ ಇದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದನ್ನು ನೀವೇ ನಿರ್ಧರಿಸಬೇಕು. ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ದೈಹಿಕ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಔಷಧ, ಚಿಕಿತ್ಸೆ ಹಾಗೂ ಆಸ್ಪತ್ರೆ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಆಯುರ್ವೇದ ಬಡವರಿಗೆ ಉತ್ತಮ ಔಷಧ’ ಎಂದು ಅಭಿಪ್ರಾಯಪಟ್ಟರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ ‘ಆಯುರ್ವೇದದಲ್ಲಿ ಹೆಚ್ಚು ಸಂಶೋಧನೆಗಳು ಆಗಬೇಕು. ಅಡ್ಡಪರಿಣಾಮಗಳು ಇಲ್ಲ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು.
ಶಾಸಕ ಅರವಿಂದ ಬೆಲ್ಲದ, ಆಸ್ಪತ್ರೆಯ ಅಧ್ಯಕ್ಷ ಮೋಹನ ಲಿಂಬಿಕಾಯಿ, ಸಂಸ್ಥೆಯ ಪ್ರಾಚಾರ್ಯ ಡಾ. ಎಸ್.ಕೆ.ಬನ್ನಿಗೋಳ, ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ಇದ್ದರು.
* ಆಯುರ್ವೇದಕ್ಕೆ ವಿಶ್ವಮಾನ್ಯತೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ದಾಪುಗಾಲು ಇಟ್ಟಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಅದೇ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಡಬೇಕು.
-ಡಾ.ಕೆ.ಎಸ್.ಶರ್ಮಾ, ಶರ್ಮಾ ಸಮೂಹ ಸಂಸ್ಥೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.