ADVERTISEMENT

ಧಾರವಾಡ: 25 ವರ್ಷದ ಬಳಿಕ ಬಣ್ಣದ ಹತ್ತಿಗೆ ಮಾರುಕಟ್ಟೆ

ಖಾಸಗಿ ಕಂಪನಿಯೊಂದಿಗೆ ಕೃಷಿ ವಿವಿ ಒಡಂಬಡಿಕೆ: ಗರಿಷ್ಠ 5 ವರ್ಷ ಬೆಳೆಸಲು ಅನುಮತಿ

ಇ.ಎಸ್.ಸುಧೀಂದ್ರ ಪ್ರಸಾದ್
Published 6 ಜುಲೈ 2021, 21:00 IST
Last Updated 6 ಜುಲೈ 2021, 21:00 IST
ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿ ವಾಣಿಜ್ಯ ಬಳಕೆಗೆ ಮುಕ್ತಗೊಳಿಸಿರುವ ಡಿಡಿಸಿಸಿ–1 ಕಂದು ಬಣ್ಣದ ಹತ್ತಿ
ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿ ವಾಣಿಜ್ಯ ಬಳಕೆಗೆ ಮುಕ್ತಗೊಳಿಸಿರುವ ಡಿಡಿಸಿಸಿ–1 ಕಂದು ಬಣ್ಣದ ಹತ್ತಿ   

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯ 1995ರಲ್ಲಿ ಅಭಿವೃದ್ಧಿಪಡಿಸಿದ್ದ ದೇಸಿ ತಳಿ ಬಣ್ಣದ ಹತ್ತಿಯು (ಡಿಡಿಸಿಸಿ–1) ಈಗ ವಾಣಿಜ್ಯ ಬಳಕೆಗೆ ಮುಕ್ತವಾಗಿದ್ದು, ಈ ಬಗ್ಗೆ ಖಾಸಗಿ ಕಂಪನಿ ಜೊತೆಗೆ ವಿಶ್ವವಿದ್ಯಾಲಯ ಒಪ್ಪಂದಕ್ಕೆ ಸಹಿ ಹಾಕಿದೆ.

ಕೃಷಿ ವಿಜ್ಞಾನಿ ಡಾ.ಬಿ.ಎಂ.ಖಾದಿ ಅವರು ಇಲ್ಲಿನ ಹೆಬ್ಬಳ್ಳಿ ಫಾರ್ಮ್‌ನಲ್ಲಿ 25 ವರ್ಷಗಳ ಹಿಂದೆ ಕಂದು ಬಣ್ಣದ ಹತ್ತಿ ತಳಿ ಅಭಿವೃದ್ಧಿಪಡಿಸಿದ್ದು, ವಿ.ವಿ ಇದನ್ನು 1999ರಲ್ಲಿ ಬಿಡುಗಡೆಮಾಡಿತ್ತು. ಈವರೆಗೆ ವಾಣಿಜ್ಯ ಬಳಕೆಗೆ ಮುಕ್ತವಾಗಿರಲಿಲ್ಲ.

ಈಗ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ (ಐಸಿಎಆರ್) ಮಾನ್ಯತೆ ಪಡೆದ ಅಗ್ರಿ ಇನ್ನೋವೇಟಿವ್ ಇಂಡಿಯಾ ಸಂಸ್ಥೆ ಜೊತೆಗೆ ಬೆಂಗಳೂರಿನ ರಿಜಿಸ್ಟ್ರೀ ಆಫ್ ಸ್ಯಾರೀಸ್‌ ಸಂಸ್ಥೆ ಬಣ್ಣದ ಹತ್ತಿ ಬೆಳೆಯಲು ಒಪ್ಪಂದ ಮಾಡಿಕೊಂಡಿದೆ.

ADVERTISEMENT

ಒಡಂಬಡಿಕೆಯನ್ವಯ ₹3 ಲಕ್ಷಕ್ಕೆ 25 ಕೆ.ಜಿ. ಬೀಜವನ್ನು ಬಳಸಿ ಗರಿಷ್ಠ ಐದು ವರ್ಷ ಬೆಳೆಸಲು ವಿಶ್ವವಿದ್ಯಾಲಯ ಅನುಮತಿ ನೀಡಿದೆ. ಒಟ್ಟು ಇಳುವರಿಯಲ್ಲಿ ಮುಂದಿನ ವರ್ಷಕ್ಕೆ ಅಗತ್ಯವುಳ್ಳ ಬೀಜವನ್ನು ಇಟ್ಟುಕೊಂಡು, ಉಳಿದ
ದ್ದನ್ನು ವಿ.ವಿಗೆ ಮರಳಿಸಬೇಕು, ಇಲ್ಲವೇ ನಾಶಪಡಿಸಬೇಕು ಎಂದು ಕರಾರು ವಿಧಿಸಿದೆ.

ಈ ಕುರಿತು ಮಾಹಿತಿ ನೀಡಿದ ವಿವಿ‌ಯ ಸಂಶೋಧನಾ ನಿರ್ದೇಶಕ ಡಾ. ಪಿ.ಎಲ್.ಪಾಟೀಲ, ‘ಬಣ್ಣದ ಹತ್ತಿ
ಯನ್ನು ವಿಶ್ವವಿದ್ಯಾಲಯದ ತಜ್ಞರ ಮೇಲ್ವಿಚಾರಣೆಯಲ್ಲೇ ಬೆಳೆಸಬೇಕು. ಇದನ್ನು ಬೆಳೆಯುವ 100 ಮೀಟರ್‌ ಅಂತರದಲ್ಲಿ ಬಿಳಿ ಹತ್ತಿ ಇರುವಂತಿಲ್ಲ. ಬೆಳೆದ ಹತ್ತಿಯನ್ನು ವಾಣಿಜ್ಯವಾಗಿ ಬಳಸಬಹುದು. ಒಟ್ಟು ಲಾಭಾಂಶದಲ್ಲಿ ವಿ.ವಿಗೆ ಶೇ 70ರಷ್ಟು, ಅಗ್ರಿ ಇನ್ನೋವೇಟಿವ್ ಇಂಡಿಯಾಗೆ ಶೇ 20ರಷ್ಟು ಮತ್ತು ಐಸಿಎಆರ್‌ಗೆ ಶೇ 10ರಷ್ಟು ಹಂಚಿಕೆಯಾಗಲಿದೆ’ ಎಂದರು.

‘ದಕ್ಷಿಣ ಭಾರತದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡುನಲ್ಲಿ ಕಪ್ಪು ಎರೆ ಮಣ್ಣಿನ ಜಮೀನು ಮುಂಗಾರಿನಲ್ಲಿ ಡಿಡಿಸಿಸಿ–1 ಬೆಳೆಯಲು ಸೂಕ್ತ. ಬಿಳಿ ಹತ್ತಿ ತಳಿಗೆ ಹೋಲಿಸಿದಲ್ಲಿ ಇದು 1.3ಪಟ್ಟು ಇಳುವರಿ ಅಧಿಕ ಮತ್ತು ಕೀಟ, ರೋಗ ನಿರೋಧಕ ಗುಣವನ್ನು ಹೊಂದಿದೆ. ರಿಜಿಸ್ಟ್ರೀ ಆಫ್ ಸ್ಯಾರೀಸ್ ಸಂಸ್ಥೆ ಸದ್ಯ ಇದನ್ನು ಬೆಂಗಳೂರು ಭಾಗದಲ್ಲಿ ಬೆಳೆಯಲಿದೆ’ ಎಂದು ಹತ್ತಿ ವಿಭಾಗದ ಹಿರಿಯ ವಿಜ್ಞಾನಿ ಡಾ. ರಾಜೇಶ್ ಎಸ್. ಪಾಟೀಲ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.