ಹುಬ್ಬಳ್ಳಿ: ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು (ಸಿ.ಎಲ್.ಟಿ) ಕಡ್ಡಾಯವಾಗಿ ಪಾಸಾಗಲು ವಿಧಿಸಿದ್ದ ಗಡುವು ಇನ್ನೆರಡು ತಿಂಗಳಲ್ಲಿ ಅಂತ್ಯವಾಗಲಿದ್ದು, ಕೋವಿಡ್ ಕಾರಣ ಪರೀಕ್ಷಾ ಪ್ರಕ್ರಿಯೆ ಸ್ಥಗಿತಗೊಳಿಸಿರುವುದರಿಂದ ನೌಕರರು ಪೇಚಿಗೆ ಸಿಲುಕಿದ್ದಾರೆ.
ಈ ವರ್ಷದ ಮಾರ್ಚ್ 22ರ ಒಳಗಾಗಿ ಸಿ.ಎಲ್.ಟಿ ಪರೀಕ್ಷೆಯನ್ನು ತೇರ್ಗಡೆ ಆಗದಿದ್ದರೆ, ಹೊಸದಾಗಿ ನೇಮಕವಾದ ನೌಕರರ ಪರಿವೀಕ್ಷಣಾ ಅವಧಿ (ಪ್ರೊಬೇಷನರಿ) ಅವಧಿ ಮುಕ್ತಾಯ
ಗೊಳಿಸಲು ಬರುವುದಿಲ್ಲ. ಅಲ್ಲದೇ, ಸೇವಾನಿರತರು ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಹಾಗೂ ಇತರ ಸೌಲಭ್ಯ ಪಡೆಯಲು ಅರ್ಹರಲ್ಲ ಎಂದು ಕಳೆದ ಆಗಸ್ಟ್‌ನಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರವು ಕಿಯೋನಿಕ್ಸ್ ಏಜೆನ್ಸಿಯ ಮೂಲಕ ವಿಭಾಗೀಯ ಕೇಂದ್ರ, ಆಯ್ದ ಜಿಲ್ಲೆಗಳಲ್ಲಿ ತಿಂಗಳಿಗೊಮ್ಮೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುತ್ತಿತ್ತು. ಅಂತಿಮ ಗಡುವು ಸಮೀಪಿಸಿದ್ದರಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಏಜೆನ್ಸಿಯು ಪರೀಕ್ಷೆಗಳನ್ನು ನಡೆಸುತ್ತಿದೆ. ನೌಕರರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಇತ್ತೀಚೆಗೆ ವಾರಕ್ಕೆ ಎರಡು ಬಾರಿಯೂ (ಶನಿವಾರ, ಭಾನುವಾರ) ಪರೀಕ್ಷೆ ಆಯೋಜಿಸುತ್ತಿದೆ. ಆದರೆ, ಪ್ರಸ್ತುತ ಪರೀಕ್ಷೆ ಸ್ಥಗಿತವಾಗಿದ್ದು, ನೌಕರರಿಗೆ ಆತಂಕ ತಂದಿದೆ.
‘ಜನವರಿ 8, 9ರಂದು ಪರೀಕ್ಷೆ ಬರೆಯಲು ಹುಬ್ಬಳ್ಳಿಯ ಚೇತನ್ ಬಿಸಿನೆಸ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನೋಂದಣಿ (ಸ್ಲಾಟ್ ಬುಕ್ಕಿಂಗ್) ಮಾಡಿ
ಕೊಂಡಿದ್ದೆ. ಆದರೆ, ಕೋವಿಡ್ ಮೂರನೇ ಅಲೆಯ ಕಾರಣ ಪರೀಕ್ಷೆ ಮುಂದೂಡ
ಲಾಗಿದೆ. ಕಿಯೊನಿಕ್ಸ್ ವೆಬ್‌ಸೈಟ್ ಪುಟವೂ ನಿಷ್ಕ್ರಿಯವಾಗಿದೆ. ಏನು ಮಾಡುವುದೋ ತಿಳಿಯುತ್ತಿಲ್ಲ’ ಎಂದು ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪರೀಕ್ಷೆಗೆ ಮೊದಲ ಅವಕಾಶ ಉಚಿತ. ನಂತರದ ಅವಕಾಶಗಳಿಗೆ ಪ್ರತಿ ಬಾರಿ ₹370 ಪರೀಕ್ಷಾ ಶುಲ್ಕ ಪಾವತಿಸಬೇಕಿದೆ. ರದ್ದಾದ ಪರೀಕ್ಷೆಯ ಶುಲ್ಕವು ಇನ್ನೂ ಮರುಪಾವತಿ ಆಗಿಲ್ಲ.
ಕಿಯೋನಿಕ್ಸ್ ಪ್ರಮಾಣಪತ್ರವೇ ಅಧಿಕೃತ: 50 ವರ್ಷ ಮೇಲ್ಪಟ್ಟ ನೌಕರರು, ಪೊಲೀಸ್, ಅರಣ್ಯ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರು, ಅಬಕಾರಿ ರಕ್ಷಕರು, ಆರೋಗ್ಯ ಕಾರ್ಯ
ಕರ್ತರು ಹಾಗೂ ಗ್ರೂಪ್-ಡಿ ನೌಕರ
ರಿಗೆ ಪರೀಕ್ಷೆಯಿಂದ ವಿನಾಯಿತಿ ಇದೆ. ನೌಕರರು ಈಗಾಗಲೇ ಅನ್ಯ ಸಂಸ್ಥೆ
ಗಳಿಂದ ಕಂಪ್ಯೂಟರ್‌ಗೆ ಸಂಬಂಧಿಸಿದ ಪ್ರಮಾಣಪತ್ರ ಪಡೆದಿದ್ದರೂ, ಕಿಯೋನಿಕ್ಸ್ ನೀಡುವ ಡಿಜಿಟಲ್ ಪ್ರಮಾಣ\ಪತ್ರವೇ ಅಧಿಕೃತ ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ಕಾಲಮಿತಿಗಳನ್ನು ಹಲವು ಸಲ ವಿಸ್ತರಿಸಿದ್ದರೂ ಎಲ್ಲ ನೌಕರರಿಗೂ ಸಿ.ಎಲ್.ಟಿ ಪಾಸಾಗಲು ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.