ADVERTISEMENT

ಮಣ್ಣಿನ ಆರೋಗ್ಯಕ್ಕೂ ಇರಲಿ ಕಾಳಜಿ

ರಾಷ್ಟ್ರೀಯ ರೈತರ ‌ದಿನಾಚರಣೆ: ಗೌಡಪ್ಪಗೋಳ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 13:38 IST
Last Updated 24 ಮಾರ್ಚ್ 2022, 13:38 IST
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ರೈತ ದಿನದ ಕಾರ್ಯಕ್ರಮವನ್ನು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ (ಎಡದಿಂದ ಎರಡನೇಯವರು) ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ರೈತ ದಿನದ ಕಾರ್ಯಕ್ರಮವನ್ನು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ (ಎಡದಿಂದ ಎರಡನೇಯವರು) ಉದ್ಘಾಟಿಸಿದರು   

ಹುಬ್ಬಳ್ಳಿ: ಹೆಚ್ಚು ಆಹಾರ ಬೆಳೆಯುವ ಭರದಲ್ಲಿ ಮಣ್ಣಿನ ಫಲವತ್ತತೆ ಕಡಿಮೆ ಮಾಡುತ್ತಿದ್ದೇವೆ. ಈಗ ರೈತರಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದ್ದು, ಆಹಾರ ಬೆಳೆಯಲು ನೀಡುವಷ್ಟು ಪ್ರಾಮುಖ್ಯತೆಯನ್ನು ಮಣ್ಣಿನ ಆರೋಗ್ಯಕ್ಕೂ ಕೊಡಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ರೈತರ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 20 ವರ್ಷಗಳ ಬಳಿಕ ಅನ್ನಕ್ಕಾಗಿ ಹಾಹಾಕಾರ ಶುರುವಾಯಿತು. ಆಗ ಹಸಿರು ಕ್ರಾಂತಿ ಆಂದೋಲನ ನಡೆಸಿ ದೊಡ್ಡ ಮಟ್ಟದಲ್ಲಿ ಆಹಾರ ಬೆಳೆಯಲಾಯಿತು. ಆಗ ಭೂಮಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದ್ದರೆ ಈಗ ರೈತ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕೃಷಿ ಭೂಮಿಯ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕನಿಷ್ಠ 2 ಇರಬೇಕು. ಈಗ ಅದು ಮೈನಸ್‌ ಹಂತಕ್ಕೆ ಹೋಗಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ವಿದೇಶಿಗರು ಬರುತ್ತಿದ್ದರು. ಆದರೆ ಈಗ ನಾವೇ ಶೇ 50ರಷ್ಟು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಬೆಳೆ ಬೇಗ ಬರಲಿ ಎನ್ನುವ ಕಾರಣಕ್ಕೆ ಮಿತಿಮೀರಿ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ದಕ್ಷಿಣ ಅಮೆರಿಕ ಹೊರತುಪಡಿಸಿದರೆ ಜಗತ್ತಿನಲ್ಲಿಯೇ ಹೆಚ್ಚು ಮಳೆ ಆಗುವುದು ಭಾರತದಲ್ಲಿ. ಪ್ರಾಕೃತಿಕವಾಗಿಯೂ ನಮ್ಮ ದೇಶ ಶ್ರೀಮಂತವಾಗಿದೆ. ಇಷ್ಟೆಲ್ಲಾ ಅನುಕೂಲಗಳಿದ್ದರೂ ನಮ್ಮ ಕೃಷಿಕರಿಗೆ ಹೆಚ್ಚು ಲಾಭ ಗಳಿಸಲು ಆಗುತ್ತಿಲ್ಲ. ವೈಜ್ಞಾನಿಕ ಬೆಲೆ ಲಭಿಸುತ್ತಿಲ್ಲ’ ಎಂದರು.

ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯದ ಡೀನ್‌ ಡಾ. ಚಿದಾನಂದ ಪಿ. ಮನಸೂರ ಮಾತನಾಡಿ ‘ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಕೃಷಿಕರಿಗೆ ನಿಯಮ ರೂಪಿಸಬೇಕಾಗಿದೆ. ರೈತರ ಅಗತ್ಯಕ್ಕೆ ತಕ್ಕಷ್ಟು ಸಾವಯವ ಗೊಬ್ಬರ ಸಿಗದ ಕಾರಣ ರಾಸಾಯನಿಕ ಗೊಬ್ಬರದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ ಇದನ್ನು ಬಳಸುವ ಮುನ್ನ ರೈತರು ವಿವೇಚನೆ ಬಳಸಬೇಕು’ ಎಂದು ಸಲಹೆ ನೀಡಿದರು.

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜೆ. ಜವಳಿ, ಕಾರ್ಯದರ್ಶಿ ಶಂಕರ ಕೋಳಿವಾಡ, ಉಪಾಧ್ಯಕ್ಷ ಎಸ್‌.ಪಿ. ಸಂಶಿಮಠ, ಕೃಷಿ ತೋಟಗಾರಿಕೆ ಉಪಸಮಿತಿ ಚೇರ್ಮನ್‌ ಸಿ.ಎನ್‌. ಕರಿಕಟ್ಟಿ, ರೈತ ಉತ್ಪಾದನಾ ಸಂಘಟನೆ ಮುಖ್ಯಸ್ಥ ಚಂದ್ರಕಾಂತ ಸಂಗೂರ, ಅಮೃತ ಅರ್ಗ್ಯಾನಿಕ್‌ನ ಚೇರ್ಮನ್‌ ಕೆ. ನಾಗರಾಜ ಹಾಗೂ ವಿವಿಧ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.