ಹುಬ್ಬಳ್ಳಿ: 'ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ 6ನೇ ಹಂತದ ಸಮಾವೇಶ ಅ. 13ರಂದು ನಗರದ ಗಬ್ಬೂರ ಬೈಪಾಸ್ ಬಳಿಯ ಮೈದಾನದಲ್ಲಿ ಆಯೋಜಿಸಲಾಗಿದೆ' ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
'ಈಗಾಗಲೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಸಮಾವೇಶ ನಡೆಸಲಾಗಿದೆ. ಇದೀಗ ಧಾರವಾಡ ಜಿಲ್ಲೆಯ ಸಮಾವೇಶ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದೇವೆ. ಸಾಮೂಹಿಕ ಇಷ್ಟಲಿಂಗ ಪೂಜೆ ಶೀರ್ಷಿಕೆಯಡಿ ಹೋರಾಟ ನಡೆಯುತ್ತಿದೆ' ಎಂದು ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದರು.
'ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಾಸ್ಸು ಮಾಡಬೇಕು ಎಂದು ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಹಿಂದಿನ ಸರ್ಕಾರ ಕೊನೆಯ ಗಳಿಗೆಯಲ್ಲಿ 2ಡಿ ಮೀಸಲಾತಿ ಘೋಷಣೆ ಮಾಡಿತ್ತು. ನೀತಿ ಸಂಹಿತೆಯಿಂದ ಅದು ಅನುಷ್ಠಾನಗೊಂಡಿಲ್ಲ. ಈಗಿನ ಸರ್ಕಾರ ತಕ್ಷಣ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಸಿದರು.
ಸಿಎಂ ಸಮಸ್ಯೆ ಬಗೆಹರಿಸಲಿ: 'ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಸೂಕ್ತಸ್ಥಾನ ಸಿಗುತ್ತಿಲ್ಲ ಎಂದು ಸಮುದಾಯದ ಅಧಿಕಾರಿಗಳು ಶಾಮನೂರ್ ಶಿವಶಂಕರಪ್ಪ ಅವರಲ್ಲಿ ಹೇಳಿರಬಹುದು. ಅದಕ್ಕಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಶಿವಶಂಕರಪ್ಪ ಅವರನ್ನು ಕರೆದು, ಅನ್ಯಾಯ ಸರಿಪಡಿಸುವ ಕೆಲಸ ಮಾಡಬೇಕು. ನನಗೂ ಸಾಕಷ್ಟು ಅಧಿಕಾರಿಗಳು ಹೇಳಿದ್ದರು, ಗುರು ಸ್ಥಾನದಲ್ಲಿ ಇರುವುದರಿಂದ ಆಡಳಿತದ ವಿಷಯದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಮಹಾಸಭಾದ ಅಧ್ಯಕ್ಷರೇ ಧ್ವನಿ ಎತ್ತಿರುವುದರಿಂದ ಸಮಾದ ಪ್ರಾಮಾಣಿಕ ಅಧಿಕಾರಿಗಳಿಗೆ ಸೂಕ್ತ ಸ್ಥಾನ ನೀಡಬೇಕು' ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.