ಹುಬ್ಬಳ್ಳಿ: ಎಲ್ಲ ಹೆಣ್ಣುಮಕ್ಕಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ನನ್ನದು. ಅದಕ್ಕಾಗಿ ಮಹಿಳೆಯರನ್ನು ಸಂಘಟಿತಗೊಳಿಸಲು ರಾಜ್ಯದಾದ್ಯಂತ ಲಿಂಗಾಯತ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಅರುಣಾದೇವಿ ಉದಯಕುಮಾರ ಹೇಳಿದರು.
ಶುಕ್ರವಾರ ಇಲ್ಲಿನ ಮೂರುಸಾವಿರ ಮಠದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ‘ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಲಿಂಗಾಯತ ಭವನ ನಿರ್ಮಿಸಿ ಅಲ್ಲಿ ಚಟುವಟಿಕೆಗಳನ್ನು ನಡೆಸಿ ಮಹಿಳೆಯರಿಗೆ ನೆರವಾಗುವುದು ಮಹಾಸಭಾದ ಪ್ರಮುಖ ಉದ್ದೇಶವಾಗಿದೆ. ಪಕ್ಷಾತೀತವಾಗಿ ಎಲ್ಲ ಸಮಾಜದವರನ್ನು ತಲುಪುವ ಗುರಿ ಹೊಂದಲಾಗಿದೆ. ಒಳ್ಳೆಯ ಕೆಲಸಕ್ಕೆ ನನ್ನ ತಂದೆ ನೆರವಾಗುತ್ತಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಭರವಸೆ ವ್ಯಕ್ತಪಡಿಸಿದರು.
‘ಎಲ್ಲ ಮಹಿಳೆಯರಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅವರಲ್ಲಿನ ಕೌಶಲ ಹೊರತಗೆದು ಸಮಾಜಕ್ಕೆ ಅನುಕೂಲವಾಗುವಂಥ ವಾತಾವರಣ ನಿರ್ಮಿಸಬೇಕಾಗಿದೆ. ಬಡ ಮಹಿಳೆಯರಿಗೆ ಕೆಎಎಸ್ ಮತ್ತು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಶಿಕಾರಿಪುರ ಮತ್ತು ಕಲಬುರ್ಗಿಯಲ್ಲಿ ತರಬೇತಿ ಕೇಂದ್ರ ತೆರೆಯುವ ಆಸೆಯಿದೆ’ ಎಂದರು.
‘ಮಹಿಳೆಯರಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಹೋರಾಡುವ ಗಟ್ಟಿತನ ಬೆಳೆಸಬೇಕಾಗಿದೆ. ಪ್ರತಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯಬೇಕು ಎನ್ನುವುದು ತಂದೆಯ ಆಶಯ. ಆದ್ದರಿಂದ ನಿಗಮ ಹಾಗೂ ಪ್ರಾಧಿಕಾರಗಳನ್ನು ರಚಿಸುತ್ತಿದ್ದಾರೆ. ಇದನ್ನು ಒಂದೇ ಸಮಾಜಕ್ಕೆ ಸೀಮಿತಗೊಳಿಸಬೇಡಿ’ ಎಂದರು.
ಸಮಾಜದ ಪ್ರಮುಖರಾದ ವಿರೂಪಾಕ್ಷಪ್ಪ ಯಮಕನಮರಡಿ, ಸದಾನಂದ ಡಂಗನವರ, ಮಂಜುನಾಥ ಹೆಬಸೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.