ಧಾರವಾಡ: ಮದುವೆ ಸಮಾರಂಭದ ಫೋಟೊ ತೆಗೆಯಲು ಮುಂಗಡ ಪಡೆದು ಪೋಟೊ ಕೊಡದೆ ಸತಾಯಿಸಿದ ಪ್ರಕರಣದಲ್ಲಿ ಸತ್ತೂರು ಕೆ.ಎಚ್.ಬಿ ಬಡಾವಣೆಯ ಛಾಯಾಗ್ರಾಹಕ ರವಿ ದೊಡ್ಡಮನಿಗೆ ₹30 ಸಾವಿರ ದಂಡವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಧಿಸಿದೆ.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ, ಪ್ರಭು ಸಿ. ಹಿರೇಮಠ ಅವರು ಈ ಆದೇಶ ನೀಡಿದ್ಧಾರೆ. ದೂರುದಾರ ಶಹಬಾಜ ಹೆಬಸೂರ ನೀಡಿದ್ದ ₹15 ಸಾವಿರ ಮುಂಗಡ, ಆತನಿಗಾದ ಅನಾನುಕೂಲಕ್ಕೆ ₹10 ಸಾವಿರ ಪರಿಹಾರ ಹಾಗೂ ಪ್ರಕರಣ ವೆಚ್ಚ ₹5 ಸಾವಿರವನ್ನು ತಿಂಗಳೊಳಗೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ಧಾರೆ.
ಏನಿದು ಪ್ರಕರಣ?:
ಧಾರವಾಡದ ಆಕಾಶವಾಣಿ ಹತ್ತಿರದ ಶೇಕ್ ಕಂಪೌಂಡ ನಿವಾಸಿ ಶಹಬಾಜ ಹೆಬಸೂರ ಅವರು ಮದುವೆ ಸಮಾರಂಭದ ಫೋಟೊ ತೆಗೆಯಲು ಛಾಯಾಗ್ರಾಹಕ ರವಿ ದೊಡ್ಡಮನಿಗೆ ₹25 ಸಾವಿರಕ್ಕೆ ಗುತ್ತಿಗೆ ನೀಡಿ, ₹5 ಸಾವಿರ ಮುಂಗಡ ನೀಡಿದ್ದರು. 2022ರ ಡಿಸೆಂಬರ್‌ನಲ್ಲಿ ಮದುವೆ ನಡೆದಿತ್ತು. ರವಿ ಫೋಟೊಗಳನ್ನು ತೆಗೆದಿದ್ದರು. ಆದರೆ, ಫೋಟೊಗಳನ್ನು ಶಹಬಾಜ ಹೆಬಸೂರ ಅವರಿಗೆ ಕೊಟ್ಟಿರಲಿಲ್ಲ.
ಶಹಬಾಜ ಅವರು ರವಿ ವಿರುದ್ಧ ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು ಮುಂಗಡ ಹಣ ಪಡೆದು ಮದುವೆ ಫೋಟೊ ತೆಗೆದು ಅವುಗಳನ್ನು ನೀಡದೆ ಇರುವುದು ಸೇವಾ ನ್ಯೂನ್ಯತೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.