ಧಾರವಾಡ: ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಅಪಾರ ಎಂದು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನಿಮಿತ ಚೌಧರಿ ಹೇಳಿದರು.
ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ವತಿಯಿಂದ ಈಚೆಗೆ ವಿಭಾಗದ ‘ವಿಜಯ ಭುವನ' ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ವಜ್ರಮಹೋತ್ಸವ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ‘ಉದ್ಯಮಶೀಲತೆಯಲ್ಲಿ ಸ್ಥಳೀಯ ಪ್ರವಾಸದ ಮಾರ್ಗದರ್ಶಿಯ ವ್ಯಾಖ್ಯಾನ ಮತ್ತು ಅನ್ವೇಷಣೆ’ ಕುರಿತು ಮಾತನಾಡಿದರು.
50 ವರ್ಷಗಳ ಹಿಂದೆ ಪ್ರವಾಸೋದ್ಯಮ ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗಿತ್ತು. ನಂತರ ಇಂದು ಪ್ರವಾಸೋದ್ಯಮ ಉದ್ಯಮವಾಗಿ ಬೆಳೆಯಿತು. ಪ್ರವಾಸೋದ್ಯಮ ಉದ್ಯಮವು ಜಾಗತಿಕ ಆರ್ಥಿಕತೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ ಎಂದರು.
ದೇಶದ ಅನೇಕ ಸಣ್ಣ ಮತ್ತು ದೊಡ್ಡ ನಗರಗಳು ಪ್ರವಾಸೋದ್ಯಮ ತಾಣಗಳಾಗಿ ಮಾರ್ಪಟ್ಟಿರುವದು ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರವಾಸೋದ್ಯಮದ ಮಾರ್ಗದರ್ಶನ ಎಂಬುದು ಒಂದು ವೃತ್ತಿಯಾಗಿ ಬೆಳೆದಿದೆ. ಪ್ರತಿಯೊಬ್ಬರು ತಾವು ವಾಸಿಸುವ ಪ್ರದೇಶದ ಕುರಿತು ಜ್ಞಾನ ಹೊಂದಬೇಕು ಎಂದು ಹೇಳಿದರು.
ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಸ್.ಸಾಳುಂಕೆ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿವೆ. ವಿದ್ಯಾರ್ಥಿಗಳು ಚೆನ್ನಾಗಿ ಓದು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರೊ.ಜಯಶ್ರೀ. ಎಸ್.ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಡಿ.ಬಿ.ಕರಡೋಣಿ,ವಿಭಾಗದ ಸಂಯೋಜಕ ಜಗದೀಶ್ ಕಿವುಡನವರ, ಐ.ಸಿ.ಮುಳಗುಂದ, ಪ್ರೊ.ಸುಷ್ಮಾ ಮಳಗಿ, ಪ್ರೊ. ರಾಣಿ ರವಿಶಂಕರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.