ಹುಬ್ಬಳ್ಳಿ:ಹುಬ್ಬಳ್ಳಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಡಿ. 25ರಂದು ಅಮರಗೋಳದ ಎಪಿಎಂಸಿಯಲ್ಲಿರುವ ಸಂಘದ ಆಡಳಿತ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿ.ಎಸ್. ಕೆಂಚನಗೌಡ್ರ ಹೇಳಿದರು.
ಬೆಳಿಗ್ಗೆ 10.45ಕ್ಕೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸಹಕಾರ ಧ್ವಜಾರೋಹಣ ಮಾಡಲಿದ್ದಾರೆ. ಸಮಾರಂಭದ ಸಾನ್ನಿಧ್ಯವನ್ನು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮೀಜಿ ಹಾಗೂ ಸೂಡಿಯ ಜುಕ್ತಿಹಿರೇಮಠದ ಕೊಟ್ಟೂರು ಬಸವೇಶ್ವರ ಸ್ವಾಮೀಜಿ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಜಗದೀಶ ಶೆಟ್ಟರ್ ವಹಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶತಮಾನೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ‘ಕೃಷಿ ಸಹಕಾರ ಸಮೃದ್ಧಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಂಘದ ಮಾಜಿ ಚೇರ್ಮನ್ನರ ಭಾವಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅನಾವರಣ ಮಾಡಲಿದ್ದಾರೆ. ‘ಅ’ ವರ್ಗದ ಸದಸ್ಯ ಸಂಘಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹಾಗೂ ‘ಬ’ ವರ್ಗದ ಸದಸ್ಯರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸನ್ಮಾನ ಮಾಡುವರು ಎಂದು ಹೇಳಿದರು.
ಸಂಘದ ಚೇರ್ಮನ್ ಬಿ.ಡಿ. ನಾಗನಗೌಡ್ರ, ನಿರ್ದೇಶಕರಾದ ಜಿ.ಆರ್. ಮೂಲಗಿ, ಸಿ.ಸಿ. ಪಾಟೀಲ, ಎಂ.ಪಿ. ಸೂರಣಗಿ ಹಾಗೂ ಆರ್.ಪಿ. ನದಾಫ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.