ಹುಬ್ಬಳ್ಳಿ: ವಿದ್ಯಾನಗರದ ಚೇತನಾ ಕಾಲೇಜು ಸಮೀಪ ನಿರ್ಮಾಣ ಹಂತದ ಟೆಂಡರ್ ಶ್ಯೂರ್ ರಸ್ತೆಯ ಮ್ಯಾನ್‌ಹೋಲ್‌ನಲ್ಲಿ ಬಿದ್ದ ಹಸುವನ್ನು ಸ್ಥಳೀಯರು ಭಾನುವಾರ ಹರಸಾಹಸ ಮಾಡಿ ಮೇಲಕ್ಕೆತ್ತಿದ್ದಾರೆ.
ವಿದ್ಯಾನಗರ– ತೋಳನಕೆರೆ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಲ್ಲಿ ಮ್ಯಾನ್‌ಹೋಲ್ ನಿರ್ಮಾಣ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಂದ ಹಸು ಸುಮಾರು ಏಳು ಅಡಿ ಆಳದ ಮ್ಯಾನ್‌ಹೋಲ್ ಒಳಗೆ ಬಿದ್ದಿದೆ. ಅಲ್ಲಿಯೇ ಆಟವಾಡುತ್ತಿದ್ದ ಮಕ್ಕಳು ಗಮನಿ, ಹಿರಿಯರಿಗೆ ತಿಳಿಸಿದ್ದಾರೆ.
ವಿಷಯ ತಿಳಿದ ಸ್ಥಳೀಯರಾದ ಖಾದರ್ ನದಾಫ್, ದಾದಾಪೀರ್, ಅಕ್ಬರ್ ಸಾಬ್, ನಾವಿ ಬಸವರಾಜ್ ಎಂಬುವರು ಸೇರಿ ಹಸುವನ್ನು ಮೇಲಕ್ಕೆತ್ತಿದ್ದಾರೆ. ‘ಗುಂಡಿಯೊಳಗೆ ಇಳಿಯದೆ ಹಸುವನ್ನು ಮೇಲಕ್ಕೆ ಎತ್ತುವುದು ಅಸಾಧ್ಯವಾಗಿತ್ತು. ಗುಂಡಿಯಲ್ಲಿ ಎರಡು ಅಡಿ ನೀರು ಸಹ ಇದ್ದ ಕಾರಣ, ಇಳಿಯುವುದು ಕಷ್ಟವಾಗಿತ್ತು. ಆದರೆ ವ್ಯಕ್ತಿಯೊಬ್ಬರು ಧೈರ್ಯವಾಗಿ ಅದರೊಳಗೆ ಇಳಿದು ಹಸುವಿಗೆ ಹಗ್ಗ ಕಟ್ಟಿದರು. ಆ ನಂತರ ನಿಧಾನವಾಗಿ ಅದನ್ನು ಮೇಲಕ್ಕೆ ಎತ್ತಲಾಯಿತು’ ಎಂದು ಖಾದರ್ ನದಾಫ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಸುವಿನ ಬದಲು ಮಗು ಒಳಗೆ ಬಿದ್ದಿದ್ದರೆ ಎಂತಹ ಅನಾಹುತವಾಗುತ್ತಿತ್ತು ಎಂದು ಯೋಚಿಸಬೇಕು. ಯಾವುದೇ ಕಾಮಗಾರಿ ನಡೆಯುವ ವೇಳೆ ಗುಂಡಿ ತೋಡಿದರೆ, ಮ್ಯಾನ್‌ಹೋಲ್ ಮಾಡಿದರೆ ಅದಕ್ಕೆ ತಪ್ಪದೆ ಮುಚ್ಚಳ ಹಾಕಬೇಕು. ನಿರ್ಲಕ್ಷ್ಯ ತೋರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.