ಹುಬ್ಬಳ್ಳಿ: ‘ಕಟ್ಟಡ ನಿರ್ಮಾಣ ಸಾಮಗ್ರಿಗಳ ದರದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ, ನಿವೇಶನ ಹಾಗೂ ಕಟ್ಟಡ ನಿರ್ಮಾಣ ದರವನ್ನು ಏಪ್ರಿಲ್ 15ರಿಂದ ಏರಿಕೆ ಮಾಡಲು ನಿರ್ಧರಿಸಲಾಗಿದೆ’ ಎಂದುಕ್ರೆಡಾಯ್ ಹುಬ್ಬಳ್ಳಿ–ಧಾರವಾಡ (ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳ ಸಂಘಟನೆಗಳ ಮಹಾಮಂಡಳ) ಅಧ್ಯಕ್ಷ ಸಾಜಿದ್ ಫರಾಶ್ ಹೇಳಿದರು.
‘ನಿರ್ಮಾಣ ಕೆಲಸಕ್ಕೆ ಅಗತ್ಯವಿರುವ ಸಿಮೆಂಟ್ ಮತ್ತು ಕಬ್ಬಿಣದ ಬೆಲೆಯು ಎರಡು ವರ್ಷಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಮರಳು, ಇಟ್ಟಿಗೆ, ಟೈಲ್ಸ್, ಗ್ರಿಲ್, ಮೆಟಲ್, ಕಾರ್ಮಿಕ ಸಂಬಳ ಸೇರಿದಂತೆ ಎಲ್ಲವೂಗಳ ದರ ಏರಿಕೆಯಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕೋವಿಡ್‌ನಿಂದಾಗಿ ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಉದ್ಯಮ ಎರಡು ವರ್ಷಗಳಾದರೂ ಚೇತರಿಸಿಕೊಂಡಿಲ್ಲ. ಉಳಿದ ಕ್ಷೇತ್ರಗಳಂತೆ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಬೆಲೆಗಳ ದರವೂ ಹೆಚ್ಚಳವಾಗಿದೆ. ಅನಿವಾರ್ಯವಾಗಿ ದರ ಏರಿಕೆ ಮಾಡಬೇಕಾದ ಸ್ಥಿತಿಯಲ್ಲಿದ್ದೇವೆ’ ಎಂದು ಹೇಳಿದರು.
‘ಹೊಸ ಲೇಔಟ್‌ಗಳಲ್ಲಿ ನಿವೇಶನಗಳ ದರ ಹಾಗೂ ಅಪಾರ್ಟ್‌ಮೆಂಟ್‌ಗಳ ಮೂಲ ದರವನ್ನು ಆಯಾ ಪ್ರದೇಶದಲ್ಲಿ ಸದ್ಯ ಇರುವ ದರಕ್ಕೆ ಅನುಗುಣವಾಗಿ ಏರಿಕೆ ಮಾಡಲಾಗುವುದು’ ಎಂದರು.
‘ವಸತಿ ಸಮುಚ್ಚಯಗಳಿಗೆ ಜಿಎಸ್‌ಟಿ ಸಬ್ಸಿಡಿ ಇಲ್ಲ. ಇದರಿಂದಾಗಿ ನಿರ್ಮಾಣಗಾರರಿಗೆ ಚದರ ಅಡಿಗೆ ₹300ರಿಂದ ₹350ರಷ್ಟು ಹೆಚ್ಚುವರಿ ಹೊರೆಯಾಗುತ್ತಿದೆ. ಹಾಗಾಗಿ, ವಸತಿ ಸಮುಚ್ಚಯ ಉದ್ದೇಶದ ಯೋಜನೆಗಳಿಗೆ ನಾವು ಮಾಡುವ ವೆಚ್ಚಕ್ಕೆ ಜಿಎಸ್‌ಟಿ ಸಬ್ಸಿಡಿ ನೀಡುವಂತೆ ಕ್ರೆಡಾಯ್ ರಾಷ್ಟ್ರೀಯ ನಿಯೋಗವು ಜಿಎಸ್‌ಟಿ ಕೌನ್ಸಿಲ್‌ಗೆ ಮನವಿ ಮಾಡಿದೆ. ಜೊತೆಗೆ, ರಾಜ್ಯ ಸರ್ಕಾರವು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ (ರೇರಾ) ನೋಂದಣಿಯಾದ ಬುಕ್ಕಿಂಗ್ ದರವನ್ನು, ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಳ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗುವುದು’ ಎಂದು ಹೇಳಿದರು.
ಸುರೇಶ ಪಿ. ಶೇಜವಾಡಕರ, ಸಂಜಯ್ ಪಿ. ಕೊಠಾರಿ, ನಾರಾಯಣ ಹಬೀಬ, ದಿಲೀಪ್ ತೆಲಿಸರ, ಗುರುರಾಜ ಅಣ್ಣಿಗೇರಿ, ಸೂರಜ್ ಅಳವಂಡಿ, ಸತೀಶ ಮುನವಳ್ಳಿ ಹಾಗೂ ಬ್ರಯಾನ್ ಡಿಸೋಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.