ಹುಬ್ಬಳ್ಳಿ: ಬಾಲಕರಿಗೆ ಚಾಕಲೇಟ್ ಆಮಿಷ ತೋರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ವಿಡಿಯೊ ಮಾಡುತ್ತಿದ್ದ ಆರೋಪದ ಮೇಲೆ ಒಡಿಶಾ ಮೂಲದ ಅಡುಗೆ ಕಾರ್ಮಿಕ ಪ್ರಭಂಜನ ಪಾಲ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಪ್ರಕರಣ ದಾಖಲಾಗಿದೆ.
ನಗರದ ಹೋಟೆಲ್ ಒಂದರಲ್ಲಿ ಅಡುಗೆ ಕಾರ್ಮಿಕರಾಗಿ ಪಾಲ ಕೆಲಸ ಮಾಡುತ್ತಿದ್ದು, ಸಂತ್ರಸ್ತ ಬಾಲಕನ ತಂದೆ ದೂರು ನೀಡಿದ್ದಾರೆ. ಇಬ್ಬರು ಬಾಲಕರನ್ನು ಪರಿಚಯಿಸಿಕೊಂಡ ಆರೋಪಿ, ತಾನು ವಾಸವಿದ್ದ ಬಾಡಿಗೆ ಮನೆಗೆ ಕರೆಸಿಕೊಳ್ಳುತ್ತಿದ್ದ. ಹಣ, ತಿಂಡಿಯ ಆಮಿಷವೊಡ್ಡಿ, ಲೈಂಗಿಕ ಕಿರುಕುಳ ನೀಡುತ್ತಿದ್ದ. ನಿರಾಕರಿಸಿದರೆ ಚಾಕು ತೋರಿಸಿ ಬೆದರಿಸುತ್ತಿದ್ದ. ಮಕ್ಕಳಿಂದಲೇ ಅಶ್ಲೀಲ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್, ‘ದೂರು ದಾಖಲಾಗಿದ್ದು, ಆರೋಪಿಯನ್ನು ಗುರುತಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದರು.
₹5.88 ಲಕ್ಷ ವಂಚನೆ: ಬಿಡುವಿನ ಸಮಯದಲ್ಲಿ ಕೆಲಸ ನೀಡುವುದಾಗಿ ಧಾರವಾಡದ ಕೆಎಚ್‌ಬಿ ಕಾಲೊನಿಯ ಜ್ಯೋತಿ ಹರಿಹರನ್ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸಿದ ವ್ಯಕ್ತಿ, ಅವರಿಂದ ₹5.88 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಜ್ಯೋತಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ನೋಡುತ್ತಿದ್ದಾಗ ಅದರಲ್ಲಿರುವ ಲಿಂಕ್ ಒತ್ತಿದ್ದಾರೆ. ತಕ್ಷಣ ವಾಟ್ಸ್‌ಆ್ಯಪ್ ನಂಬರ್‌ಗೆ ಬಿಡುವಿನ ವೇಳೆಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಸಂದೇಶ ಕಳುಹಿಸಿ, ಹೆಸರು ನೋಂದಾಯಿಸಲು ವಂಚಕ ಅವರಿಂದ ಮಾಹಿತಿ ಪಡೆದಿದ್ದಾನೆ. ನಂತರ ಟೆಲಿಗ್ರಾಮ್‌ನಲ್ಲಿ ಅವರನ್ನು ಸಂಪರ್ಕಿಸಿ ಉದ್ಯೋಗದ ನೆಪದಲ್ಲಿ ವಿವಿಧ ಟಾಸ್ಕ್‌ಗಳನ್ನು ನೀಡಿ, ಅವರ ಖಾತೆಗೆ ಸ್ವಲ್ಪ ಹಣ ವರ್ಗಾಯಿಸಿದ್ದಾನೆ. ಹೆಚ್ಚಿನ ನೀಡುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್‌ಗೆ ಹಲ್ಲೆ: ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಒಯ್ಯಲು ಮುಂದಾದ ಪೊಲೀಸ್ ಅಧಿಕಾರಿಗೆ, ಅದೇ ವ್ಯಕ್ತಿ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ ಪ್ರಕರಣ ಕೌಲಪೇಟೆಯ ಕೆಇಬಿ ಕ್ರಾಸ್ ಬಳಿ ಸೋಮವಾರ ನಡೆದಿದೆ.
ಶ್ರವಣಕುಮಾರ ರಾಥೋಡ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿಯಾಗಿದ್ದು, ಚನ್ನಪೇಟೆಯ ಅಜಯ ಬಳ್ಳಾರಿ ವಿರುದ್ಧ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಇಬಿ ಕ್ರಾಸ್ ಬಳಿ ಅಜಯ್ ಮತ್ತು ಅಲ್ಲಿದ್ದ ಪಾನ್‌ಶಾಪ್ ಅಂಗಡಿಯ ವ್ಯಕ್ತಿ ಜಗಳವಾಡುತ್ತಿದ್ದರು. ತಲೆಗೆ ಪೆಟ್ಟು ಬಿದ್ದ ಅಜಯನನ್ನು ಶ್ರವಣಕುಮಾರ ಅವರು ಆಟೊದಲ್ಲಿ ಆಸ್ಪತ್ರೆಗೆ ಕಳುಹಿಸಲು ಯತ್ನಿಸುತ್ತಿದ್ದಾಗ, ಏಕಾಏಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.