ADVERTISEMENT

ವರದಕ್ಷಿಣೆ ಕಿರುಕುಳ ಬೆದರಿಕೆ | ವ್ಯಕ್ತಿ ಆತ್ಮಹತ್ಯೆ; PI, ASI ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 18:16 IST
Last Updated 3 ನವೆಂಬರ್ 2023, 18:16 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹುಬ್ಬಳ್ಳಿ: ಇಲ್ಲಿನ ಕೋಟಿಲಿಂಗೇಶ್ವರ ನಗರದ ನಿವಾಸಿ ನಿಖಿಲ್‌ ಕುಂದಗೋಳ(27) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕೇಶ್ವಾಪುರ ಠಾಣೆಯ ಇನ್‌ಸ್ಪೆಕ್ಟರ್‌, ಎಎಸ್ಐ ಸೇರಿ ಎಂಟು ಮಂದಿ ವಿರುದ್ಧ ಹಳೇಹುಬ್ಬಳ್ಳಿ‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇನ್‌ಸ್ಪೆಕ್ಟರ್‌ ಯು.ಎಚ್. ಸಾತೇನಹಳ್ಳಿ, ಎಎಸ್ಐ ಜಯಶ್ರೀ ಚಲವಾದಿ, ಕೇಶ್ವಾಪುರ ಆಂಜನೇಯ ಬಡಾವಣೆಯ ಪ್ರೀತಿ ಪೊಗಳಾಪುರ, ಧನರಾಜ, ಮಂಜುಳಾ, ಆನಂದಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ನಿಖಿಲ್‌  ಅವರ ತಾಯಿ ಗೀತಾ ಕುಂದಗೋಳ ದೂರು ನೀಡಿದ್ದಾರೆ.

ADVERTISEMENT

‘ನಿಖಿಲ್ ಆತ್ಮಹತ್ಯೆಗೆ ಅವನ ಪತ್ನಿ ಕುಟುಂಬದವರು ಹಾಗೂ ಕೇಶ್ವಾಪುರ ಠಾಣೆ ಇನ್‌ಸ್ಪೆಕ್ಟರ್ ಮತ್ತು ಎಎಸ್‌ಐ ಕಾರಣ. ಗುರುವಾರ ತಡರಾತ್ರಿ ಮಗನಿಗೆ ನೋಟಿಸ್ ನೀಡಿ, ದೌರ್ಜನ್ಯ ಎಸಗಿದ್ದರು’ ಎಂದು ನಿಖಿಲ್ ಕುಟುಂಬದವರು ಶುಕ್ರವಾರ ಕಿಮ್ಸ್‌ ಶವಾಗಾರದ ಎದುರು ಪ್ರತಿಭಟನೆ ನಡೆಸಿ ಆರೋಪಿಸಿದ್ದರು.

ದೂರಿನಲ್ಲಿ ಏನಿದೆ?: 2022ರ ಡಿಸೆಂಬರ್‌ನಲ್ಲಿ ನಿಖಿಲ್‌ ಹಾಗೂ ಪ್ರೀತಿ ಮದುವೆ ಮಾಡಲಾಗಿತ್ತು. ಶ್ರಾವಣದ ಸಂದರ್ಭ ತವರಿಗೆ ಹೋಗಿದ್ದಳು. ಮತ್ತೊಬ್ಬ ಹುಡುಗನ ಜೊತೆ ಅವಳು ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ನಿಖಿಲ್‌ಗೆ ತಿಳಿದಿದ್ದು, ಅದರ ವಿಡಿಯೊ ಸಹ ದೊರೆತಿತ್ತು. ಪ್ರಕರಣಕ್ಕೆ ಸಂಬಂಧಿಸಿ ನ. 2ರಂದು ಕೇಶ್ವಾಪುರ ಠಾಣೆಗೆ ನಿಖಿಲ್‌ನನ್ನು ಕರೆಸಿ, ಶುಕ್ರವಾರ(ನ. 3) ಮಧ್ಯಾಹ್ನ 12 ರಿಂದ 2ರ ಒಳಗೆ, ಮದುವೆ ಸಂದರ್ಭ ನೀಡಿದ್ದ ₹2 ಲಕ್ಷ ಹಣ, ಬಾಂಡೆ ಸಾಮಗ್ರಿ ಹಾಗೂ ಚಿನ್ನಾಭರಣ ನೀಡಬೇಕು. ಇಲ್ಲದಿದ್ದರೆ ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹುಡುಗಿ ಕುಟುಂಬದವರ ಮತ್ತು ಪೊಲೀಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ, ಕೇಶ್ವಾಪುರ ಠಾಣೆವರೆಗೆ ಶವಯಾತ್ರೆ ನಡೆಸಿ ಪ್ರತಿಭಟಿಸಲಾಗುವುದು’ ಎಂದು ನಿಖಿಲ್‌ ತಂದೆ ಮೋಹನ ಕುಂದಗೋಳ ಎಚ್ಚರಿಸಿದ್ದರು.

ಬೆಳಿಗ್ಗೆಯೇ ಶವಗಾರಕ್ಕೆ ನಿಖಿಲ್‌ ಶವ ತಂದಿದ್ದರೂ, ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಸಂಜೆಯಾದರೂ ಶವ ಪರೀಕ್ಷೆ ನಡೆದಿರಲಿಲ್ಲ. ಕುಟುಂಬದವರ ಆಗ್ರಹದಂತೆ ಪ್ರಕರಣ ದಾಖಲಾದ ನಂತರ, ಶವ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.