ನವಲಗುಂದ: ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರ ಭೂಮಿಯ ದಾಖಲೆಗಳನ್ನು ಕೃಷಿ ಇಲಾಖೆಗೆ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ತಹಶೀಲ್ದಾರ್ ಕಚೇರಿ ಶಿರಸ್ತೇದಾರ ಕೃಷ್ಣ ಅರೇರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಗಂಗಪ್ಪ ಮನಮಿ ಮಾತನಾಡಿ, ‘ಪ್ರವಾಹ ಹಾಗೂ ಅತಿವೃಷ್ಟಿಯಾದಾಗ 72 ಗಂಟೆಯ ಒಳಗೆ ದಾಖಲೆ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಕೃಷಿ ಇಲಾಖೆ ರೈತರಿಗೆ ಸಕಾಲದಲ್ಲಿ ತಿಳಿಸಿಲ್ಲ. ಅ.15 ಕೊನೆಯ ದಿನ ಎಂದು ಹೇಳಲಾಗಿದೆ. ಅವಧಿ ವಿಸ್ತರಿಸಿ ಮಾಹಿತಿ ತಿಳಿಯದ ರೈತರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ನಿಂಗಪ್ಪ ಸುತಗಟ್ಟಿ ಮಾತನಾಡಿ, ‘ನವಲಗುಂದ ಅಷ್ಟೇ ಅಲ್ಲದೆ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಪತಹಶೀಲ್ದಾರ್ ಕಚೇರಿ ಮೊರಬದಲ್ಲಿಯೂ ದಾಖಲೆ ಸಲ್ಲಿಸಲು ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಬೆಳೆಹಾನಿ ಪರಿಹಾರವನ್ನು ತ್ವರಿತಗತಿಯಲ್ಲಿ ಒದಗಿಸಿ, ರೈತರು ಜಿ.ಪಿ.ಎಸ್ ಮಾಡಲು ಇರುವ ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಬೇಕು’ ಎಂದು ಧುರೀಣ ಸಿದ್ಧನಗೌಡ ಪಾಟೀಲ ಆಗ್ರಹಿಸಿದರು.
ಜಯಪ್ರಕಾಶ ಬದಾಮಿ, ಮಂಜುನಾಥ ಇಮ್ಮಡಿ, ನಾಗಪ್ಪ ಹರ್ತಿ, ದೇವರಾಜ ಕರಿಯಪ್ಪನವರ, ಹೊಳೆಯಪ್ಪ ಹೊಳೆಯಣ್ಣವರ, ಮಹ್ಮದ ಬಿಜಾಪುರ, ಸಂತೋಷ ಹೊಸಮನಿ, ಶ್ರೀಧರ ಪಟ್ಟಣಶೆಟ್ಟಿ, ಕಲ್ಮೆಶ ಮಾದರ, ಈರಣ್ಣ ಬಳಿಗೆರ, ಮಲ್ಲಿಕಾರ್ಜುನ ಸಂಗನಗೌಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.