ADVERTISEMENT

ಧಾರವಾಡ | ಲಾಕ್‌ಡೌನ್‌ ಪರಿಣಾಮ: ಹೊಲದಲ್ಲೇ ಕೊಳೆಯುತ್ತಿದೆ ಫಸಲು

ರೈತರ ಬೆವರಿಗೆ ಸಿಗದ ಬೆಲೆ, ಮಾರುಕಟ್ಟೆಗೆ ಸಾಗಣೆಯೂ ಸಂಕಷ್ಟ

ಎಂ.ಚಂದ್ರಪ್ಪ
Published 20 ಏಪ್ರಿಲ್ 2020, 19:39 IST
Last Updated 20 ಏಪ್ರಿಲ್ 2020, 19:39 IST
ಗಾಮನಗಟ್ಟಿ ಗ್ರಾಮದಲ್ಲಿ ಮೂಲಂಗಿ ಕಿತ್ತೆಸೆಯುತ್ತಿರುವ ರೈತ ಬಸವರಾಜ
ಗಾಮನಗಟ್ಟಿ ಗ್ರಾಮದಲ್ಲಿ ಮೂಲಂಗಿ ಕಿತ್ತೆಸೆಯುತ್ತಿರುವ ರೈತ ಬಸವರಾಜ   

ಹುಬ್ಬಳ್ಳಿ: ಗಿಡದ ತುಂಬ ಫಸಲಿದ್ದರೂ ರೈತರ ಮುಖದಲ್ಲಿ ಕಳೆಯಿಲ್ಲ. ಬೆಳೆ ತೆಗೆಯಲು ಅವರು ಸುರಿಸಿದ ಬೆವರಿಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ಉತ್ತು, ಬಿತ್ತು ಬೆಳೆದ ಫಸಲು ಗಿಡದಲ್ಲೇ ಹಾಳಾಗುತ್ತಿದ್ದರೂ ರೈತರು ಲಾಕ್‌ಡೌನ್‌ ಕಾರಣಕ್ಕೆ ಅಸಹಾಯಕರಾಗಿದ್ದಾರೆ.

ತಾಲ್ಲೂಕಿನ ರೇವಡಿಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ರೈತರು ನೀರಾವರಿ ಸೌಲಭ್ಯದಲ್ಲಿ ಬದನೆಕಾಯಿ, ಟೊಮೆಟೊ, ಬೆಂಡೆಕಾಯಿ, ಹಸಿ ಮೆಣಸಿನಕಾಯಿ ಬೆಳೆದಿದ್ದಾರೆ. ಲಾಕ್‌ಡೌನ್‌ ಪರಿಣಾಮದಿಂದ ಎದುರಾದ ಸಾಗಣೆ ಸಮಸ್ಯೆ ಹಾಗೂ ಬೆಲೆ ಕುಸಿತದಿಂದ 25 ಎಕರೆಯಲ್ಲಿ ಬೆಳೆದಿರುವ ಬಹುತೇಕ ರೈತರ ಫಸಲು ಕೊಳೆಯುತ್ತಿದೆ.

ಉತ್ತಮ ಇಳುವರಿ ಬಂದ ವೇಳೆ ಕೊರೊನಾ ಭೀತಿ ಎದುರಾಯಿತು. ಲಾಕ್‌ಡೌನ್‌ ಶುರುವಾದಾಗಲೇ ಕೆಲವರು ಗಿಡದ ಆರೈಕೆಯನ್ನೂ ನಿಲ್ಲಿಸಿದ್ದಾರೆ. ರೇವಡಿಹಾಳ ಗ್ರಾಮದ ರವಿ ದುರ್ಗಪ್ಪ ಹರಿಜನ ಹಾಗೂ ದುರ್ಗಪ್ಪ ಮಹದೇವಪ್ಪ ಹರಿಜನ ಅವರು ತಲಾ ಎರಡು ಎಕರೆಯಲ್ಲಿ ಟೊಮೆಟೊ, ಬದನೆಕಾಯಿ ಹಾಗೂ ಬೆಂಡೆಕಾಯಿ ಬೆಳೆದಿದ್ದಾರೆ. ಗಿಡದ ತುಂಬ ಫಸಲೂ ಇದೆ. ಆದರೆ, ಫಸಲನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಗಿಡದಲ್ಲೇ ಬಿಟ್ಟಿದ್ದಾರೆ. ಒಂದಿಷ್ಟನ್ನು ಹೊಲದಲ್ಲೇ ಅರಗಿದ್ದಾರೆ. ಅದೇ ಗ್ರಾಮದ ದಾವಲ್‌ಸಾಬ್‌ ಐದು ಎಕರೆಯಲ್ಲಿ ಟೊಮಟೊ ಬೆಳೆದಿದ್ದಾರೆ. ಬಹಳಷ್ಟು ಹಣ್ಣು ಗಿಡದಲ್ಲೇ ಕೊಳೆಯಲಾರಂಭಿಸಿದೆ. ಚನ್ನಬಸು ಸೇರಿದಂತೆ ಗ್ರಾಮದ ಹಲವು ರೈತರ ಪಾಡು ಇದಕ್ಕಿಂತ ಭಿನ್ನವಾಗಿಲ್ಲ.

ADVERTISEMENT

‘ಒಂದು ಬಾರಿ ಮಾರುಕಟ್ಟೆಗೆ ಫಸಲು ಒಯ್ದಿದ್ದೆವು. ಪೂರ್ತಿ ಫಸಲು ಮಾರಾಟಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ. ಲಾಠಿಯಿಂದ ಹೊಡೆದಿದ್ದರಿಂದ ಫಸಲನ್ನು ಅಲ್ಲೇ ಬಿಟ್ಟು ಬಂದೆವು. ಮತ್ತೊಂದು ಬಾರಿ ಪಾಸ್‌ ‍ಪಡೆದು ಸಾಗಿಸಲು ಮುಂದಾದೆವು. ಆದರೆ, ಪೊಲೀಸರು ತಡೆದರು‘ ಎಂದು ರೇವಡಿಹಾಳ ಗ್ರಾಮದದುರ್ಗೇಶ್‌ ಮಹಾದೇವಪ್ಪ ಹರಿಜನ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.