ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಬೆಂಬಲ ಬೆಲೆಯಡಿ 20 ಕಡೆ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಲಾಗಿದೆ. ನೋಂದಣಿ ಆರಂಭವಾದ ದಿನದಿಂದ ಸೆಪ್ಟೆಂಬರ್ 10ರ ವರೆಗೆ 2,625 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ಧಾರವಾಡ–152, ಹುಬ್ಬಳ್ಳಿ–608, ಅಣ್ಣಿಗೇರಿ–485, ಕುಂದಗೋಳ– 190, ನವಲಗುಂದ–1190 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದು, ನವಲಗುಂದ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕುಂದಗೋಳದಲ್ಲಿ ಕಡಿಮೆ ನೋಂದಣಿ ಆಗಿವೆ.
ಅಣ್ಣಿಗೇರಿಯಲ್ಲಿ 2, ಧಾರವಾಡದಲ್ಲಿ 3, ಹುಬ್ಬಳ್ಳಿಯಲ್ಲಿ 5, ಕುಂದಗೋಳದಲ್ಲಿ 2, ನವಲಗುಂದದಲ್ಲಿ 8 ಕಡೆ ಖರೀದಿ ಕೇಂದ್ರ ಆರಂಭಿಸಲಾಗಿದೆ. ಅಣ್ಣಿಗೇರಿಯ ಪಿಕೆಪಿಎಸ್‌ನಲ್ಲಿ 385 ರೈತರು ಹೆಸರು ನೋಂದಾಯಿಸಿಕೊಂಡಿದ್ದರೆ, ನವಲಗುಂದ ಎಪಿಎಂಸಿಯಲ್ಲಿ (ಟಿಎಪಿಸಿಎಂಎಸ್ ಅಣ್ಣಿಗೇರಿ) 316 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅತಿ ಹೆಚ್ಚು ಅಣ್ಣಿಗೇರಿ ಖರೀದಿ ಕೇಂದ್ರದಲ್ಲಿ ನೋಂದಣಿ ಆಗಿವೆ.
‘ಎಫ್‌ಎಕ್ಯೂ ಗುಣ್ಣಮಟ್ಟದ ಹೆಸರುಕಾಳುಗಳನ್ನು ರೈತರಿಂದ ಖರೀದಿಸಲಾಗುತ್ತಿದ್ದು, ನೋಂದಣಿ ಕಾಲಾವಧಿಯನ್ನು 45 ದಿನ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ಕ್ವಿಂಟಲ್‍ಗೆ ₹8,682 ದರದಲ್ಲಿ ಒಬ್ಬ ರೈತರಿಂದ ಎಕರೆಗೆ 2 ಕ್ವಿಂಟಲ್‌ನಂತೆ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುವುದು. ನೋಂದಣಿ ಕಾರ್ಯ ಮಾತ್ರ ನಡೆದಿದ್ದು, ಖರೀದಿಯನ್ನು ಇನ್ನೆರಡು ದಿನಗಳಲ್ಲಿ ಆರಂಭಿಸಲಾಗುವುದು’ ಎಂದು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳದ ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕ ವಿನಯ ಪಾಟೀಲ ತಿಳಿಸಿದರು.
ಎಂಎಸ್‌ಪಿ ಯೋಜನೆಯಡಿ ಹೆಸರುಕಾಳು ಖರೀದಿಸಲು ನಾಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಸಂಸ್ಥೆಗಳನ್ನು ರಾಜ್ಯ ಸರ್ಕಾರದ ಖರೀದಿ ಸಂಸ್ಥೆಗಳಾಗಿ ಗುರುತಿಸಲಾಗಿದೆ.
‘ಹೆಸರು ಕಾಳು ಖರೀದಿಗೆ ಸರ್ಕಾರ ಸಾಕಷ್ಟು ನಿಯಮಗಳನ್ನು ವಿಧಿಸಿದ್ದು, ಇದನ್ನು ಸರಳಗೊಳಿಸಿ ರೈತರಿಂದ ಹೆಸರು ಕಾಳು ಖರೀದಿಸಬೇಕು. ಹೆಸರು ಕಾಳು ಬೆಳೆ ಪ್ರಮಾಣವು ಕಡಿಮೆ ಆಗಿದ್ದು, ಮಳೆ ನಿರಂತರವಾಗಿ ಸುರಿಯುತ್ತಿದೆ. ಬೆಳೆ ಒಣಗಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೆಳೆ ಬೆಳದ ರೈತರು ಕಂಗಾಲಾಗಿದ್ದಾರೆ. ಹೆಸರು ಖರೀದಿಗೆ ಯಾವುದೇ ನಿಯಮಗಳನ್ನು ವಿಧಿಸದೇ ಖರೀದಿಗೆ ಮುಂದಾಗಬೇಕು. ಹೆಸರು ಬೆಳೆ ಬೆಳೆದ ರೈತರಿಗೂ ಅನುಕೂಲವಾಗುತ್ತದೆ’ ಎಂದು ರೈತ ಮುಖಂಡ ಸುಭಾಷ ಅವ್ವಣ್ಣವರ ತಿಳಿಸಿದರು.
ಎಫ್‌ಎಕ್ಯೂ ಗುಣ್ಣಮಟ್ಟದ ಹೆಸರುಕಾಳುಗಳನ್ನು ರೈತರಿಂದ ಖರೀದಿಸುತ್ತಿರುವುದರಿಂದ. ಖರೀದಿ ಕಾರ್ಯ ಇನ್ನು ಆರಂಭಿಸಿಲ್ಲ. ನೋಂದಣಿ ಕಾರ್ಯ ಮಾತ್ರ ನಡೆದಿದೆವಿನಯ ಪಾಟೀಲ ಶಾಖಾ ವ್ಯವಸ್ಥಾಪಕ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳ ಹುಬ್ಬಳ್ಳಿ
ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಸುತ್ತಿದ್ದಾರೆ. ಆದರೆ ಸಾಕಷ್ಟು ನಿಯಮಗಳನ್ನು ಹಾಕಿದ್ದು ರೈತರು ಕಂಗಾಲಾಗಿದ್ದಾರೆ. ನಿಯಮ ವಿಧಿಸದೇ ಖರೀದಿಗೆ ಮುಂದಾಗಬೇಕುಸುಭಾಷ ಅವ್ವಣ್ಣವರ, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.