ಹುಬ್ಬಳ್ಳಿ: ತಂತ್ರಜ್ಞಾನ ಆವಿಷ್ಕಾರಗಳು ಹೆಚ್ಚುತ್ತಾ ಹೋದಂತೆ, ಸೈಬರ್ ವಂಚಕರ ಯೋಜನೆ ಮತ್ತು ಯೋಚನೆಗಳು ಸಹ ವಿಸ್ತಾರವಾಗುತ್ತ ಹೋಗುತ್ತಿವೆ. ಒಟಿಪಿ, ಲಿಂಕ್ ಕಳುಹಿಸಿ ಹಣ ವರ್ಗಾವಣೆ, ಮಾರುಕಟ್ಟೆಯಲ್ಲಿ ಹಣ ಹೂಡಿಕೆ ನೆಪದಲ್ಲಿ ಆನ್‌ಲೈನ್ ಕಳ್ಳರು, ಇದೀಗ ‘ಡಿಜಿಟಲ್ ಅರೆಸ್ಟ್’ ಹೆಸರಲ್ಲಿ ಕೋಟಿ ಕೋಟಿ ವಂಚಿಸುತ್ತಿದ್ದಾರೆ.
ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಒಂದು ವಾರದ ಅವಧಿಯಲ್ಲಿ ‘ಡಿಜಿಟಲ್ ಅರೆಸ್ಟ್’ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹1.84 ಕೋಟಿ ವರ್ಗಾಯಿಸಿಕೊಂಡಿದ್ದಾರೆ.
ಬ್ಯಾಂಕ್ ನಿವೃತ್ತ ನೌಕರರಾದ ಧಾರವಾಡದ ಗಣಪತಿ ಅವರಿಗೆ ‘ಅಶ್ಲೀಲ ವಿಡಿಯೊ ಹಾಗೂ ಜಾಹೀರಾತು ಪ್ರದರ್ಶನ ಮಾಡಿರುವ ಆರೋಪದ ಕುರಿತು ಪ್ರಕರಣ ದಾಖಲಾಗಿದೆ’ ಎಂದು ಮುಂಬೈ ಪೊಲೀಸರ ಹೆಸರಲ್ಲಿ ಕರೆ ಮಾಡಿ ಬೆದರಿಸಿ, ₹95.50 ಲಕ್ಷ; ‘ನಕಲಿ ಪಾರ್ಸ್‌ಪೋರ್ಟ್, ಎಟಿಎಂ ಕಾರ್ಡ್ ಹಾಗೂ ಡ್ರಗ್ಸ್ ಪಾರ್ಸಲ್ ನಿಮ್ಮ ವಿಳಾಸಕ್ಕೆ ಬಂದಿದೆ’ ಎಂದು ಹುಬ್ಬಳ್ಳಿಯ ದವನ್ ಅವರಿಗೆ ಕಸ್ಟಮ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿ ಬೆದರಿಸಿ ₹7.49 ಲಕ್ಷ ಹಾಗೂ ಅಕ್ಷಯ ಎನ್ನುವವರಿಗೆ ‘ತೈವಾನ್‌ನಿಂದ ಪಾರ್ಸಲ್ ಬಂದಿದ್ದು, ಅದರಲ್ಲಿ ಕಾನೂನು ಬಾಹಿರ ವಸ್ತುಗಳಿವೆ’ ಎಂದು ಕ್ರೈಂ ಬ್ರ್ಯಾಂಚ್ ಡಿಸಿಪಿ ಹೆಸರಲ್ಲಿ ಬೆದರಿಸಿ ₹81.06 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
‘ಡಿಜಿಟಲ್ ಅರೆಸ್ಟ್’ ಹೆಸರಲ್ಲಿ ಬೆದರಿಸುವ ವಂಚಕರು ಸ್ಕೈಪ್ ಮತ್ತು ವಾಟ್ಸ್‌ಆ್ಯಪ್ ವಿಡಿಯೊ ಮೂಲಕ ಕರೆ ಮಾಡುತ್ತಾರೆ. ಎಐ ತಂತ್ರಜ್ಞಾನ ಬಳಸಿಕೊಂಡು ಪೊಲೀಸ್ ಠಾಣೆ, ಸಿಬಿಐ ಕಚೇರಿಯಂತೆ ವೃತ್ತಿಪರ ವಾತಾವರಣ ನಿರ್ಮಿಸಿಕೊಂಡು, ಅಧಿಕಾರಿಗಳ ಹೆಸರಲ್ಲಿ ವಿಡಿಯೊ ಕರೆ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳ ಹಾಗೂ ಡಾರ್ಕ್ ವೆಬ್ ಮೂಲಕ ವ್ಯಕ್ತಿಯ ಆಧಾರ್ ಕಾರ್ಡ್, ಫೋಟೊಗಳನ್ನು ಪಡೆದು, ನಕಲಿ ದಾಖಲೆ ಸೃಷ್ಟಿಸಿ, ಪ್ರಕರಣ ದಾಖಲಾಗಿರುವ ಕುರಿತು ದಾಖಲೆಗಳನ್ನು ತೋರಿಸುತ್ತಾರೆ. ಕೆಲ ಸಮಯದ ನಂತರ, ಮತ್ತೊಬ್ಬ ವ್ಯಕ್ತಿ ಕರೆ ಮಾಡಿ, ಪ್ರಕರಣದಿಂದ ಖುಲಾಸೆ ಮಾಡುವುದಾಗಿ ನಂಬಿಸಿ ಹಣ ವರ್ಗಾಯಿಸಿಕೊಳ್ಳುತ್ತಾನೆ’ ಎನ್ನುತ್ತಾರೆ ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ.
‘ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಹಾಗೂ ವಿವಿಧ ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಿರುವವರನ್ನೇ ಗುರಿಯಾಗಿಟ್ಟುಕೊಳ್ಳುವ ಈ ವಂಚಕರು, ಅವರ ಸಂಪೂರ್ಣ ಮಾಹಿತಿ ಪಡೆದು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಡಾರ್ಕ್ ವೆಬ್ ಮೂಲಕ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಹಾಗೂ ವಹಿವಾಟುಗಳನ್ನು ಸಂಗ್ರಹಿಸಿ, ಸಮಯ ನೋಡಿ ವಂಚಿಸುತ್ತಾರೆ. ಬೆಂಗಳೂರಿನಲ್ಲಿ ಒಂದೇ ದಿನ ₹80 ಕೋಟಿಗೂ ಹೆಚ್ಚು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಸಿ ಹಣ ವಂಚಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.