ಹುಬ್ಬಳ್ಳಿ: ಇಲ್ಲಿನ ವೀರಾಪುರ ಓಣಿಯ ಕರಿಯಮ್ಮದೇವಿ ದೇವಸ್ಥಾನದಲ್ಲಿ ಸಿಲಿಂಡರ್‌ನಲ್ಲಿದ್ದ ಅನಿಲ ಸೋರಿಕೆಯಿಂದ ಸ್ಫೋಟವಾಗಿ ಅರ್ಚಕ ಸೇರಿದಂತೆ ನಾಲ್ವರು ಗಾಯಗೊಂಡಿರುವ ಪ್ರಕರಣ ಮಂಗಳವಾರ ನಡೆದಿದೆ.
ಅರ್ಚಕ ಪ್ರಶಾಂತ ಹಿರೇಮಠ ಮತ್ತು ದೇವಸ್ಥಾನಕ್ಕೆ ಬಂದಿದ್ದ ಸ್ಥಳೀಯರಾದ ಐಶ್ವರ್ಯಾ, ಸರಸ್ವತಿ ಮತ್ತು ನಾಲ್ಕು ವರ್ಷದ ನಿಯತಿ ಬಿಜವಾಡ ಗಾಯಗೊಂಡಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ. ಶೇ 60ರಷ್ಟು ಸುಟ್ಟಿರುವ ಮಗು ನಿಯತಿ ಪರಿಸ್ಥಿತಿ ಗಂಭೀರವಾಗಿದೆ.
ಅಯ್ಯಪ್ಪ ಮಾಲಾಧಾರಿಗಳು ದೇವಸ್ಥಾನದಲ್ಲಿ ಸನ್ನಿಧಿ ಮಾಡಿಕೊಂಡಿದ್ದು, ಅಲ್ಲಿಯೇ ಅಪಾಹಾರ, ಊಟ ಮಾಡುತ್ತಿದ್ದರು. ಅದಕ್ಕಾಗಿ ಅಡುಗೆ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿದ್ದರು. ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕ ಪ್ರಶಾಂತ ಅವರು ಸನ್ನಿಧಿ ಬಾಗಿಲು ತೆರೆದಿದ್ದಾರೆ. ಸಿಲಿಂಡರ್‌ನಲ್ಲಿದ್ದ ಅನಿಲ ಸೋರಿಕೆಯಾಗಿದ್ದರಿಂದ ಒಮ್ಮೆಲೆ ಸ್ಫೋಟಗೊಂಡಿದೆ. ಪರಿಣಾಮ ಒಳಗಿದ್ದ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿ, ಅರ್ಚಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಡಿಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
1.01 ಲಕ್ಷ ವಂಚನೆ: ವಿದ್ಯುತ್ ಬಿಲ್ ಪಾವತಿಸಲು ಗೂಗಲ್‌ನಲ್ಲಿ ದೊರೆತ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಇಲ್ಲಿನ ದೇವರಗುಡಿಹಾಳ ರಸ್ತೆಯ ದೀಪಕ್ ಶೂರಪಾಲಿ ಅವರು, ₹1.01 ಲಕ್ಷ ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದಾರೆ.
ದೀಪಕ್ ಅವರು ಗೂಗಲ್‌ನಲ್ಲಿ ದೊರೆತ ಗ್ರಾಹಕರ ಸಹಾಯವಾಣಿಗೆ ಕರೆ ಮಾಡಿ, ವಿದ್ಯುತ್ ಬಿಲ್ ಪಾವತಿ ಮಾಡುವುದು ಹೇಗೆಂದು ಮಾಹಿತಿ ಕೇಳಿದ್ದಾರೆ. ಸಲಹೆ ನೀಡುವ ನೆಪದಲ್ಲಿ ವಂಚಕ, ಮೊಬೈಲ್‌ಗೆ ಟ್ರಿಮ್ ವೀವರ್ ಕ್ವಿಕ್ ಸಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಿದ್ದಾನೆ. ಅವರಿಂದ ₹10 ತನ್ನ ಖಾತೆಗೆ ವರ್ಗಾಯಿಸಿಕೊಂಡು, ಯುಪಿಐ ಪಿನ್ ಸಂಖ್ಯೆ ತಿಳಿದು, ನಂತರ ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ: ಕ್ರೆಡಿಟ್ ಕಾರ್ಡ್ ಶುಲ್ಕ ಕಡಿಮೆ ಮಾಡುವುದಾಗಿ ನಗರದ ತುಕಾರಾಮ ಮಿರಾಶಿ ಅವರಿಗೆ ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿದ ವಂಚಕ, ಅವರಿಂದ ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ಮೊಬೈಲ್‌ಗೆ ಬಂದ ಒಟಿಪಿ ಪಡೆದು, ₹1.14 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ವ್ಯಕ್ತಿ ಬಂಧನ: ತಲ್ವಾರ್ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದ ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೊನಿ ನಿವಾಸಿ ಬಾಲಾಜಿ ಸಾಕೆ ಎಂಬಾತನನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ತಲ್ವಾರ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಬಾಲಾಜಿ ಗೂಡ್ಸ್‌ಶೆಡ್ ರಸ್ತೆ ಮತ್ತು ಮಾರೆಮ್ಮ ರಸ್ತೆ ಬಳಿ ನಿಷೇಧಿತ ತಲ್ವಾರ್ ಹಿಡಿದು ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿ, ನಿಷೇಧಿತ ಮಾರಕಾಸ್ತ್ರಗಳ ಬಳಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬೈಕ್ ಕಳವು ಆರೋಪಿಗಳ ಬಂಧನ: ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಸಾರ ಒಣಿಯ ಪ್ರಕಾಶ ಮತ್ತು ಮಂಟೂರು ರಸ್ತೆಯ ಯುವನಕುಮಾರ ಬಂಧಿತ ಆರೋಪಿಗಳು. ಡಿ. 29ರಂದು ಲೋಕಪ್ಪನ ಹಕ್ಕಲದ ಸೇತುವೆ ಬಳಿ ಕಳವು ಮಾಡಿದ್ದ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದಾಗ ಅವರನ್ನು ಇನ್‌ಸ್ಪೆಕ್ಟರ್ ಸಂತೋಷ ಪವಾರ್ ನೇತೃತ್ವದ ತಂಡ ಬಂಧಿಸಿದೆ. ವಿಚಾರಣೆಗೆ ಒಳಪಡಿಸಿದಾಗ ವಿದ್ಯಾನಗರ ಮತ್ತು ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ವಿಚಾರಣೆ ಮುಂದುವರಿದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.