ಹುಬ್ಬಳ್ಳಿ: ಸಮಗ್ರ ಕೃಷಿಯೊಂದಿಗೆ ಹೈನುಗಾರಿಕೆಗೆ ಒತ್ತು ಕೊಟ್ಟು ಬದುಕು ಹಸನಾಗಿಸಿಕೊಂಡವರು ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದ ರೈತ ಬಸವಣೆಪ್ಪ ಅದರಗುಂಜಿ.
ತಮ್ಮ 11 ಎಕರೆ ಜಮೀನಿನಲ್ಲಿ 7 ಎಕರೆ ಕಬ್ಬು, ಒಂದೂವರೆ ಎಕರೆ ಹುಲ್ಲು, ಒಂದು ಎಕರೆ ಸೋಯಾಬಿನ್, ಅರ್ಧ ಎಕರೆ ಭತ್ತ ಹಾಗೂ ತರಕಾರಿಗಳನ್ನು ಬೆಳೆದಿದ್ದಾರೆ. ಜೊತೆಗೆ ಎಂಟೂವರೆ ಎಕರೆ ಜಾಗದಲ್ಲಿ ಹೈನುಗಾರಿಕೆ ಮಾಡಿಕೊಂಡಿದ್ದು, ಡೇರಿಯನ್ನು ಸ್ಥಾಪಿಸಿಕೊಂಡಿದ್ದಾರೆ.
ಮೂಲತಃ ಕೃಷಿ ಕುಟುಂಬದ, 73 ವರ್ಷದ ಬಸವಣೆಪ್ಪ ಅವರು ನೆಮ್ಮದಿಯುತ ಜೀವನಕ್ಕಾಗಿ ಕೃಷಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಎರಡು ಹಸುಗಳಿಂದ ಹೈನುಗಾರಿಕೆ ಆರಂಭಿಸಿದ ಇವರ ಬಳಿ ಇದೀಗ ಗೀರ್, ಎಚ್‌ಎಫ್, ಸಿಂಧಿ, ಹಳ್ಳಿಕಾರ, ಜರ್ಸಿ ತಳಿಯ ಅಂದಾಜು 35 ಹಸುಗಳಿವೆ.
ಮೇವು ಕತ್ತರಿಸಲು ಯಂತ್ರ ಇಟ್ಟುಕೊಂಡಿದ್ದಾರೆ. ಹಸುಗಳ ಸಗಣಿ ಮತ್ತು ಗಂಜಲು ಸುಲಭವಾಗಿ ಒಂದೆಡೆ ಸಂಗ್ರಹವಾಗುವಂತೆ ಗುಂಡಿಗಳ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಅದೆಲ್ಲವನ್ನು ಜಮೀನಿಗೆ ಗೊಬ್ಬರವಾಗಿ ಬಳಸುತ್ತಾರೆ. ಕೃಷಿ ಇಲಾಖೆಯ ನೆರವಿನಿಂದ ಮೂರು ವರ್ಷಗಳ ಹಿಂದೆ 21 ಮೀಟರ್ ಉದ್ದ 21 ಮೀಟರ್ ಅಗಲ, 10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.
‘ದಿನಕ್ಕೆ ಅಂದಾಜು 130ರಿಂದ 140 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಕೆಎಂಎಫ್ (ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ)ನಿಂದ ಲೀಟರ್‌ಗೆ ₹30 ದರ ಸಿಗುತ್ತದೆ. ಹೈನುಗಾರಿಕೆಯಿಂದ ತಿಂಗಳಿಗೆ ಅಂದಾಜು ₹50 ಸಾವಿರ ಲಾಭ ಪಡೆಯುತ್ತಿದ್ದೇವೆ’ ಎಂದು ಬಸವಣೆಪ್ಪ ಅದರಗುಂಜಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಹೈನುಗಾರಿಕೆಯಿಂದ ಜಮೀನುಗಳಿಗೆ ಹೆಚ್ಚು ಅನುಕೂಲವಾಗಿದ್ದು, 15X4 ಅಳತೆಯ ಎರಡು ತೊಟ್ಟಿಗಳ ಮೂಲಕ ಎರೆಹುಳು ಗೊಬ್ಬರ ತಯಾರಿಸುತ್ತಿದ್ದು, ಬಯೋಗ್ಯಾಸ್ ನಿರ್ಮಿಸಿಕೊಂಡಿದ್ದೇವೆ. ವರ್ಷಕ್ಕೆ ಅಂದಾಜು 3 ಟನ್ ಗೊಬ್ಬರ ಉತ್ಪಾದಿಸಿ, ಕೃಷಿ ಕಾರ್ಯಕ್ಕೆ ಬಳಸುತ್ತಿದ್ದೇವೆ’ ಎಂದು ತಿಳಿಸಿದರು.
‘ಈಗಾಗಲೇ ಸಾಕಷ್ಟು ಮಳೆ ಸುರಿದಿದ್ದು, ಬಿಡುವು ಬಿಟ್ಟರೆ ಬೆಳೆಗಳು ಚೆನ್ನಾಗಿ ಬಂದು, ಇಳುವರಿ ಹೆಚ್ಚಲಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೇವೆ’ ಎಂದರು.
ಕೌಟುಂಬಿಕ ಶ್ರಮ ಅಧಿಕ ಸಮಯ ಬೇಡುವ ಹೈನುಗಾರಿಕೆಯಿಂದ ನಿರಂತರ ಆದಾಯ ಪಡೆಯಬಹುದು. ಸಾವಯವ ಕೃಷಿ ಮಾಡಿ ಮಣ್ಣಿನ ಫಲವತ್ತತೆ ಕಾಪಾಡಬೇಕುಬಸವಣೆಪ್ಪ ಅದರಗುಂಜಿ ಬೆಲವಂತರ ಗ್ರಾಮ ಕಲಘಟಗಿ
ವಿಯಟ್ನಾಂಗೆ ಪ್ರವಾಸ
‘ವಿದೇಶಗಳಲ್ಲಿನ ಕೃಷಿ ವ್ಯವಸ್ಥೆಯನ್ನು ಅರಿಯಲೆಂದೇ ವಿವಿಧ ಜಿಲ್ಲೆಗಳ 16 ಜನ ರೈತರು ಸ್ವಂತ ಖರ್ಚಿನಲ್ಲಿ 10 ದಿನಗಳ ಕಾಲ ವಿಯಟ್ನಾಂ ದೇಶಕ್ಕೆ ಪ್ರವಾಸ ಕೈಗೊಂಡು ಅ.2ರಂದು ವಾಪಸ್ ಬಂದಿದ್ದೇವೆ. ಅಲ್ಲಿನ ಕೃಷಿ ತಾಂತ್ರಿಕತೆ ಮತ್ತು ವ್ಯವಸ್ಥೆ ಅದ್ಭುತವಾಗಿದ್ದು ನಮ್ಮಲ್ಲಿನ ಲಭ್ಯ ಸಂಪನ್ಮೂಲಗಳ ಮೂಲಕ ಕೃಷಿಯನ್ನು ಇನ್ನಷ್ಟು ಉತ್ತಮಗೊಳಿಸುವ ಬಗೆಯನ್ನು ಕಂಡುಕೊಂಡಿದ್ದೇವೆ’ ಎಂದು ರೈತ ಬಸವಣೆಪ್ಪ ಅದರಗುಂಜಿ ತಿಳಿಸಿದರು. ‘ರೈತ ಬಡವನಲ್ಲ ವಿದೇಶ ಸುತ್ತುವ ಮಟ್ಟಿಗೆ ಆತ ಬೆಳೆಯಬಲ್ಲ ಎಂಬುದಕ್ಕೇ ಕೃಷಿ ಕಾಯಕ ಹಾಗೂ ನಾವೇ ಸಾಕ್ಷಿ’ ಎಂದು ಹೆಮ್ಮೆಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.