ಹುಬ್ಬಳ್ಳಿ: ನವರಾತ್ರಿ ಹಬ್ಬದ ಆಗಮನ ಆಗುತ್ತಿದ್ದಂತೆ ಹುಬ್ಬಳ್ಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯ ಹಲವು ಭಾಗಗಳಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜನೆಯ ಉತ್ಸಾಹ ಗರಿಗೆದರಿದೆ.
ಉತ್ತರ ಭಾರತದ ಹಲವು ಸಮುದಾಯಗಳು ಹುಬ್ಬಳ್ಳಿಗೆ ವ್ಯಾಪಾರ– ವಹಿವಾಟಿನ ಕಾರಣದಿಂದ ಬಂದಾಗ ಅವರೊಂದಿಗೆ ಗರ್ಭಾ ಹಾಗೂ ದಾಂಡಿಯಾ ನೃತ್ಯ ಸಂಸ್ಕೃತಿಯೂ ಇಲ್ಲಿ ಕಾಲಿಟ್ಟಿದೆ. ಈಚೆಗಿನ 10 ವರ್ಷಗಳಲ್ಲಿ ಆ ಸಮುದಾಯಗಳಷ್ಟೇ ಅಲ್ಲದೇ ಇಲ್ಲಿಯ ಹಲವು ಸಂಘ–ಸಂಸ್ಥೆಗಳೂ ದಾಂಡಿಯಾ ಕಾರ್ಯಕ್ರಮ ಆಯೋಜನೆ ಮಾಡುತ್ತಿವೆ. ವರ್ಷ ವರ್ಷವೂ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ.
‘ದಾಂಡಿಯಾ ಎಂದರೆ ಕೋಲಾಟ. ಮೊದಲಿನಿಂದಲೂ ಇಲ್ಲಿ ಕೋಲಾಟದ ಸಂಸ್ಕೃತಿ ಇದ್ದರೂ, ನವರಾತ್ರಿಗೆ ಗರ್ಭಾ ಹಾಗೂ ದಾಂಡಿಯಾ ಆಡುವುದು ಹೊಸ ಆಕರ್ಷಣೆಯಾಗಿದೆ. ಚಿಕ್ಕಮಕ್ಕಳಿಂದ ಹಿಡಿದು 60–65 ವರ್ಷದವರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಹುಬ್ಬಳ್ಳಿ ನಗರದಲ್ಲೇ ಕನಿಷ್ಠ 10–15 ಸ್ಥಳಗಳಲ್ಲಿ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ’ ಎಂದು ಪ್ರೇರಣಾ ಡಾನ್ಸ್ ಸ್ಕೂಲ್‌ನ ಮುಖ್ಯಸ್ಥೆ ಪ್ರೇರಣಾ ಎಸ್. ತಿಳಿಸಿದರು.
‘ಗುಜರಾತಿ ಸಮುದಾಯವರಿಗೆ ಇದು ಸಂಸ್ಕೃತಿಯ ಅಂಗವೇ ಆಗಿದೆ. ಉತ್ತರ ಭಾರತದ ಇನ್ನೂ ಹಲವು ಸಮುದಾಯಗಳು ಪ್ರತಿ ವರ್ಷ ದಾಂಡಿಯಾ ಕಾರ್ಯಕ್ರಮ ಆಯೋಜಿಸುತ್ತಿವೆ. ಇದಕ್ಕಾಗಿ ವಿಶೇಷ ಗುಜರಾತಿ ಉಡುಪು, ಗಾಗ್ರಾ, ಚನಿಯಾ–ಚೋಲಿ ಸೇರಿದಂತೆ ನೃತ್ಯಕ್ಕೆ ಬೇಕಾಗುವ ವಸ್ತ್ರಗಳು ಬಾಡಿಗೆಗೆ ಸಹ ಸಿಗುತ್ತಿವೆ. ಕನ್ನಡಿಗರು ಇಳಕಲ್ ಸೀರೆ ಧರಿಸಿಯೂ ಕೋಲಾಟ ನಡೆಸುತ್ತಾರೆ. ಯುವಜನರು ಡಿಜೆ ಹಾಗೂ ಹೊಸದಾಗಿ ಬಂದಿರುವ ಸಿನಿಮಾ ಹಾಗೂ ಆಲ್ಬಂ ಹಾಡುಗಳಿಗೆ ಮಾರು ಹೋಗಿದ್ದಾರೆ’ ಎಂದು ಅವರು ತಿಳಿಸಿದರು.
‘ಕಳೆದ 5–6 ವರ್ಷಗಳಿಂದ ದಸರಾ ಉತ್ಸವ ಆಚರಿಸುತ್ತಿದ್ದೇವೆ. ಈ ವರ್ಷ ಪ್ರಥಮ ಬಾರಿಗೆ ದಾಂಡಿಯಾ ಆಯೋಜಿಸಿದ್ದೇವೆ. ಟಿಕೆಟ್ ಇದ್ದರೂ ಉಚಿತವಾಗಿದೆ. ನಗರದ ಹಲವೆಡೆ ದಾಂಡಿಯಾ ಕಾರ್ಯಕ್ರಮಕ್ಕೆ ಶುಲ್ಕ ಇದೆ. ನಮ್ಮ ಸಮುದಾಯದಲ್ಲಿ ಬಡವರೂ ಇದ್ದು ಪ್ರತಿಯೊಬ್ಬರೂ ಪಾಲ್ಗೊಂಡು ಆನಂದಿಸಲಿ ಎಂಬ ಉದ್ದೇಶದಿಂದ ಉಚಿತವಾಗಿ ಆಯೋಜಿಸಿದ್ದೇವೆ’ ಎಂದು ಕಮರಿಪೇಟೆಯ ದಸರಾ ಉತ್ಸವ ಸಮಿತಿಯ ವಿಜಯ್ ಪವಾರ ತಿಳಿಸಿದರು.
‘ಯುವಜನರಲ್ಲಿ ದಾಂಡಿಯಾ ನೃತ್ಯದ ಬಗ್ಗೆ ಅಪಾರ ಉತ್ಸಾಹ ಇದೆ. ಕಳೆದ ವರ್ಷ ನಮ್ಮ ಸಂಸ್ಥೆಯಿಂದ ಆಯೋಜಿಸಿದ್ದ ದಾಂಡಿಯಾ ನೃತ್ಯ ಸ್ಪರ್ಧೆಯಲ್ಲಿ ಎಲ್ಲ ವಯೋಮಾನದವರೂ ಪಾಲ್ಗೊಂಡು ಸಂಭ್ರಮಿಸಿದರು’ ಎಂದು ಉತ್ತರ ಕರ್ನಾಟಕ ವುಮನ್ಸ್ ಫೌಂಡೇಶನ್‌ನ ಅಶ್ವಿನಿ ಕುಬಸದ ತಿಳಿಸಿದರು.
ಎಸ್‌ಎಸ್‌ಕೆ ಸಮಾಜ
‘ಹುಬ್ಬಳ್ಳಿಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮಾಜದಿಂದ ತುಳಜಾಭವಾನಿ ದೇವಸ್ಥಾನದಲ್ಲಿ ಕಳೆದ 8–10 ವರ್ಷಗಳಿಂದ ಗರ್ಭಾ ಹಾಗೂ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಗೋಕುಲ ರಸ್ತೆಯ ವಾಸವಿ ಕಲ್ಯಾಣ ಮಂಟಪ ತುಮಕೂರು ಓಣಿಯ ಸಿದ್ದವೀರಪ್ಪನ ಪೀಠ ಹಾಗೂ ಹಳೇಹುಬ್ಬಳ್ಳಿಗಳಲ್ಲೂ ನಮ್ಮ ಸಮಾಜದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಮ್ಖಾನಾ ಮೈದಾನದಲ್ಲೂ ನಡೆಯುತ್ತದೆ. ಮಕ್ಕಳು–ಮಹಿಳೆಯರು–ವೃದ್ಧರು ಎಲ್ಲರಿಗೂ ಸಂಭ್ರಮ ತರುವ ಈ ಕಾರ್ಯಕ್ರಮ ನವರಾತ್ರಿಗೆ ವಿಶೇಷ ಮೆರುಗು ನೀಡುತ್ತಿದೆ’ ಎಂದು ಸಮಾಜದ ಉಪ ಮುಖ್ಯ ಧರ್ಮದರ್ಶಿ ಭಾಸ್ಕರ ಜಿತೂರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.