ADVERTISEMENT

ಹುಬ್ಬಳ್ಳಿ | ನವರಾತ್ರಿ ಉತ್ಸವ: ಸಾಂಸ್ಕೃತಿಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 15:19 IST
Last Updated 4 ಅಕ್ಟೋಬರ್ 2024, 15:19 IST
ಹಳೆ ಹುಬ್ಬಳ್ಳಿಯ ಮೇದಾರ ಓಣಿ ಪಡದಯ್ಯನ ಹಕ್ಕಲ ಏಳು ಮಕ್ಕಳ ತಾಯಮ್ಮ ದೇವಿಗೆ ಅಲಂಕಾರ 
ಹಳೆ ಹುಬ್ಬಳ್ಳಿಯ ಮೇದಾರ ಓಣಿ ಪಡದಯ್ಯನ ಹಕ್ಕಲ ಏಳು ಮಕ್ಕಳ ತಾಯಮ್ಮ ದೇವಿಗೆ ಅಲಂಕಾರ    

ಹುಬ್ಬಳ್ಳಿ: ನವರಾತ್ರಿ ಉತ್ಸವದ ಪ್ರಯುಕ್ತ ನಗರದ ದೇಗುಲಗಳಲ್ಲಿ ದೇವಿಯ ಮೂರ್ತಿಗಳಿಗೆ ಉತ್ಸವದ ಎರಡನೇ ದಿನವಾದ ಶುಕ್ರವಾರ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. 

ನಗರದ ಮೇದಾರ ಸಮಾಜ ಪಂಚಾಯಿತಿ ಟ್ರಸ್ಟ್‌ ಕಮಿಟಿ ವತಿಯಿಂದ ಕರಿಯಮ್ಮ ದೇವಿಗೆ ವಿಶೇಷ ಅಲಂಕಾರ. ಮೇದಾರ ಓಣಿಯ ಪಡದಯ್ಯನ ಹಕ್ಕಲ ಏಳು ಮಕ್ಕಳ ತಾಯಮ್ಮ ದೇಗುಲ, ದಾಜೀಬಾನ ಪೇಟ ತುಳಜಾ ಭವಾನಿ ದೇವಸ್ಥಾನ. ಕಾಳಮ್ಮನ ಅಗಸಿಯ ಕಾಳಿಕಾ ದೇವಸ್ಥಾನ. ಹೊಸೂರು ವೃತ್ತದ ಗಾಳಿ ದುರ್ಗಾದೇವಿ ದೇವಸ್ಥಾನ. ಜನತಾ ಬಜಾರ್‌ನ ಲಕ್ಷ್ಮಿ ದೇವಸ್ಥಾನ ಹಾಗೂ ದೇಶಪಾಂಡೆ ನಗರದ ಕಾಮಾಕ್ಷಿ ದೇವಸ್ಥಾನ ಸೇರಿದಂತೆ ನಗರದ ಎಲ್ಲಾ ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಗಳಿಗೆ ನವರಾತ್ರಿ ಉತ್ಸವದ ಎರಡನೇ ದಿನದ ನಿಮ್ಮಿತ್ತ ವಿಶೇಷ ಅಲಂಕಾರ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು. 

ಶುಕ್ರವಾರ ಮುಂಜಾನೆಯೇ ದೇವಿಯ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಹಸಿರು ಉಡುಗೆ ತೊಡಿಸಿ, ವಿವಿಧ ಬಗೆಯ ಹೂವು, ಹಣ್ಣು–ಹಂಪಲಗಳಿಂದ ಅಲಂಕಾರ ಮಾಡಿ ಪೂಜಿಸಲಾಯಿತು. ಮಹಿಳೆಯರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. 

ADVERTISEMENT

‘ನವರಾತ್ರಿ ಉತ್ಸವ ಮುಗಿಯುವ ತನಕವೂ ನಿತ್ಯ ಭಕ್ತರು ದೇವಿಯ ಅಲಂಕಾರ ಹಾಗೂ ಪೂಜೆಗಾಗಿ ವಿವಿಧ ಬಗೆಯ ಹೂವು– ಹಣ್ಣುಗಳನ್ನು ನೀಡುತ್ತಾರೆ. ಪೂಜೆಯ ನಂತರ ಭಕ್ತರಿಗೆ ಹಣ್ಣುಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ’ ಎಂದು ಎಸ್‌.ಎಸ್‌.ಕೆ.ತುಳಜಾ ಭವಾನಿ ದೇವಸ್ಥಾನದ ಉಪ ಮುಖ್ಯ ಧರ್ಮದರ್ಶಿ ಹೇಳಿದರು. 

ಸಾಂಸ್ಕೃತಿಕ ಕಾರ್ಯಕ್ರಮ: ‘ತುಳಜಾ ಭವಾನಿ ದೇವಸ್ಥಾನದ ಸಭಾ ಭವನದಲ್ಲಿ ಶನಿವಾರ ಮಧ್ಯಾಹ್ನ 2ರಿಂದ ರಾತ್ರಿ 9ರ ವರೆಗೆ ಎಸ್‌ಎಸ್‌ಕೆ ಸಮಾಜ ಕೇಶ್ವಾಪುರ ಯುವದಳ ಸಮಿತಿ ಹಾಗೂ ಮಹಿಳಾ ಮಂಡಳದ ವತಿಯಿಂದ ರಂಗೋಲಿ, ಚಿತ್ರಕಲೆ, ಮೆಹಂದಿ, ಮ್ಯೂಜಿಕಲ್‌ ಚೇರ್‌, ಭಕ್ತಿ ಗೀತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಭಾನುವಾರ ಸೋಲೊ ಹಾಗೂ ಸಾಮೂಹಿಕ ನೃತ್ಯ, ದಾಂಡಿಯಾ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಅ.12ರ ವರೆಗೂ ಲಿಲಿತ ಸಹಸ್ರ ನಾಮಾವಳಿ ಪಠಣ ಕೂಡ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ದುರ್ಗಾ ನಮಸ್ಕಾರ: ದಾಜಿಬಾನಪೇಟೆಯ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಅ.6ರಂದು (ಭಾನುವಾರ) ಬೆಳಿಗ್ಗೆ 6.30ರಿಂದ 7.45ರ ತನಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕದ ವತಿಯಿಂದ ದುರ್ಗಾ ನಮಸ್ಕಾರ ಹಾಗೂ ಭಕ್ತಿಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಪೂರ್ಣ ಆಚಾರ್ಯ ತಂಡದವರಿಂದ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಸಂಜೆ 6.30ಕ್ಕೆ ಕಥಕ್‌ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. 

ಹುಬ್ಬಳ್ಳಿಯ ಮೇದಾರ ಸಮಾಜ ಪಂಚಾಯಿತಿ ಟ್ರಸ್ಟ್ ಕಮಿಟಿ ವತಿಯಿಂದ ಕರಿಯಮ್ಮ ದೇವಿಗೆ ಅಲಂಕಾರ 
ಹುಬ್ಬಳ್ಳಿಯ ದಾಜೀಬಾನ ಪೇಟೆಯ ತುಳಜಾ ಭವಾನಿ ದೇವಿ ಮೂರ್ತಿಯ ಅಲಂಕಾರ
ಹುಬ್ಬಳ್ಳಿಯ ಕಾಳಮ್ಮನ ಅಗಸಿ ಶ್ರೀ ಕಾಳಿಕಾದೇವಿ ಮೂರ್ತಿಯ ಅಲಂಕಾರ
ಹುಬ್ಬಳ್ಳಿ ಹೊಸೂರು ವೃತ್ತದ ಗಾಳಿ ದುರ್ಗಾದೇವಿ ಮೂರ್ತಿಗೆ ಅಲಂಕಾರ – ಪ್ರಜಾವಾಣಿ ಚಿತ್ರಗಳು
ಹುಬ್ಬಳ್ಳಿಯ ದಾಜೀಬಾನ ಪೇಟ ತುಳಜಾ ಭವಾನಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿರುವುದು  –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.