ಮಹಾಲಿಂಗಪುರ: ‘ರೈತರ ಜಮೀನು ಕಬಳಿಸುವ ಹುನ್ನಾರ ನಡೆಸಿರುವ ವಕ್ಫ್ ಬೋರ್ಡ್ ಜಮೀನುಗಳಿಗೆ ಕಾಲಿಟ್ಟರೆ ರಾಜ್ಯದಲ್ಲಿ ರಕ್ತಪಾತ ಆಗುವುದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜೀವ ಕೊಟ್ಟಾದರೂ ಹಿಂದೂಗಳ ಜಮೀನು ಉಳಿಸಲು ಪ್ರಯತ್ನಿಸಲಾಗುವುದು’ ಎಂದು ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾಂವಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 'ವಕ್ಫ್ ಬೋರ್ಡ್ ರದ್ದು ಮಾಡುವಂತೆ ಆಗ್ರಹಿಸಿ ಶ್ರೀರಾಮಸೇನೆ ಹೋರಾಟ ಮಾಡುತ್ತಲೇ ಬಂದಿದೆ. ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡುವ ಮಾಹಿತಿ ಪಡೆದುಕೊಂಡು ರೈತರ ಜಮೀನುಗಳಿಗೆ ಉತಾರೆಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ಮಾಡಿಕೊಂಡು ನೋಟಿಸ್ ನೀಡಲಾಗುತ್ತಿದೆ. ವಕ್ಫ್ ಬೋರ್ಡ್‍ಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ರನ್ನಬೆಳಗಲಿ ಪಟ್ಟಣದ ರೈತರ 5.6 ಎಕರೆ ಜಮೀನು ತಮ್ಮದೆಂದು ವಕ್ಫ್ ಆಸ್ತಿಯಿಂದ ನೋಟಿಸ್ ನೀಡಲಾಗಿದೆ' ಎಂದರು.
ದತ್ತಮಾಲಾ ಅಭಿಯಾನ: 'ಚಿಕ್ಕಮಗಳೂರು ದತ್ತಪೀಠದಲ್ಲಿಯ ಇಸ್ಲಾಮಿಕ್ ಅತಿಕ್ರಮಣ ಮುಕ್ತಿಗಾಗಿ, ಸಂಪೂರ್ಣ ಹಿಂದೂ ಪೀಠಕ್ಕಾಗಿ ನ.4 ರಿಂದ 10ರವರೆಗೆ ಶ್ರೀರಾಮಸೇನೆ ನೇತೃತ್ವದಲ್ಲಿ ದತ್ತ ಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನ.4 ರಂದು ಮಾಲಾ ಧಾರಣೆ ಮಾಡಲಾಗುತ್ತದೆ. ನ.7ರಂದು ದತ್ತ ದೀಪೋತ್ಸವ, ನ.9 ರಂದು ದತ್ತನ ಜೋಳಿಗೆ ಹಿಡಿದುಕೊಂಡು ಪಡಿ ಸಂಗ್ರಹ ಮಾಡಲಾಗುತ್ತದೆ ಎಂದರು.
ನ.10 ರಂದು ದತ್ತಪೀಠದ ಚಂದ್ರದ್ರೋಣದಲ್ಲಿ ಪ್ರಮೋದ್ ಮುತಾಲಿಕ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದ್ದು, ಮಾಧವಿ ಲತಾ, ಸಿ.ಟಿ.ರವಿ, ಪ್ರತಾಪ್ ಸಿಂಹ, ಗಂಗಾಧರ ಕುಲಕರ್ಣಿ, ಸಿದ್ದಲಿಂಗ ಸ್ವಾಮೀಜಿ ಭಾಗವಹಿಸಲಿದ್ದಾರೆ' ಎಂದರು.
'ಸರ್ಕಾರಕ್ಕೆ ನಮ್ಮ ಬೇಡಿಕೆಗಳಿವೆ. ದತ್ತಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು. ಕೇವಲ ಹಿಂದು ಅರ್ಚಕರು ಇರಬೇಕು. ಮೌಲ್ವಿ ತೆಗೆದು ನಾಗೇನಹಳ್ಳಿಗೆ ಕಳುಹಿಸಬೇಕು. ದತ್ತ ಭಕ್ತರಿಗೆ ಮಹಾಪ್ರಸಾದ ಹಾಗೂ ವಸತಿ ವ್ಯವಸ್ಥೆ ಆಗಬೇಕು. ಪೀಠದಲ್ಲಿ ಕಳುವಾದ ವಸ್ತುಗಳನ್ನು ಪೀಠಕ್ಕೆ ಮರಳಿಸಬೇಕು. ನಿತ್ಯ ಗಾಣಗಾಪುರದಿಂದ ದತ್ತಪೀಠಕ್ಕೆ ಬಸ್ ಸೇವೆ ಆರಂಭಿಸಬೇಕು' ಎಂದು ಆಗ್ರಹಿಸಿದರು.
ಮುಖಂಡರಾದ ತಾನಾಜಿ ಕಿರಿಕಿರಿ, ಮಹಾಂತೇಶ ಗುಡೇಜಾಡರ, ಈಶ್ವರ ಕ್ಯಾನ್ಯಾಗೋಳ, ಅನೀಲ ಹೊನ್ನಪ್ಪಗೋಳ, ಪ್ರಹ್ಲಾದ ನೂಲಿ, ಚೇತನ ಬರಡೋಲ, ರಾಘು ಕಬಾಡಿ, ರವಿ ಲಾತೂರ, ಯಮನಪ್ಪ ಕೋರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.