ADVERTISEMENT

ಹಾಲಿನ ಪುಡಿ ಬಿಕರಿಗೆ ಗ್ರಹಣ: ಗೋದಾಮಿನಲ್ಲಿ ಉಳಿದ 3,854 ಕ್ವಿಂಟಲ್‌ ದಾಸ್ತಾನು

ಬಿ.ಜೆ.ಧನ್ಯಪ್ರಸಾದ್
ಇಮಾಮ್‌ಹುಸೇನ್‌ ಗೂಡುನವರ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
<div class="paragraphs"><p>ಹಾಲಿನ ಪುಡಿ ಪ್ಯಾಕೆಟ್‌</p></div>

ಹಾಲಿನ ಪುಡಿ ಪ್ಯಾಕೆಟ್‌

   

ಧಾರವಾಡ/ ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಯ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಂದ ಪೂರೈಸಿದ ಹಾಲಿನಿಂದ ತಯಾರಿಸಿದ್ದ 3,854 ಕ್ವಿಂಟಲ್‌ ಕೆನೆರಹಿತ ಹಾಲಿನ ಪುಡಿ ಮಾರಾಟವಾಗದೆ ಧಾರವಾಡ ಜಿಲ್ಲಾ ಹಾಲು ಒಕ್ಕೂಟದ (ಧಾಮುಲ್‌) ಗೋದಾಮಿನಲ್ಲಿಯೇ ಉಳಿದಿದೆ.

ಒಕ್ಕೂಟಗಳಿಗೆ ಪೂರೈಸುವ ಹಾಲು ಮಾರಾಟ ಮಾಡಿದ ನಂತರವೂ ಉಳಿಯುವ ಹಾಲಿನಿಂದ ಈ ಕೆನೆರಹಿತ ಪುಡಿ ತಯಾರಿಸಲಾಗುತ್ತಿದೆ. ಹಾಲಿನ ಕೊರತೆ ಎದುರಿಸುತ್ತಿದ್ದ ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳ ಡೇರಿಗಳು ಟೆಂಡರ್ ಪ್ರಕ್ರಿಯೆ ಮೂಲಕ ಈ ಪುಡಿ ಖರೀದಿಸುತ್ತಿದ್ದವು. ಕೆಲವೊಮ್ಮೆ ವಿದೇಶಕ್ಕೂ ರಫ್ತಾಗುತ್ತಿತ್ತು. ಕೆ.ಜಿಗೆ ₹250ರಿಂದ ₹300ರ ವರೆಗೆ ದರ ಇರುತ್ತಿತ್ತು. 

ADVERTISEMENT

ಆದರೆ, ಈ ಬಾರಿ ವಿವಿಧ ರಾಜ್ಯಗಳಲ್ಲಿ ಹಾಲಿನ ಉತ್ಪಾದನೆಯ ಪ್ರಮಾಣ ಹೆಚ್ಚಿದೆ. ಹಾಗಾಗಿ, ಹಾಲಿನ ಪುಡಿಗೆ ಬೇಡಿಕೆ ಕುಸಿದಿದ್ದು, ಈಗ ಕೆ.ಜಿಗೆ ₹215 ಇದೆ. ಹಾಗಾಗಿ, ದರ ಏರಬಹುದು ಎಂಬ ನಿರೀಕ್ಷೆಯಿಂದ ಹಲವು ತಿಂಗಳಿಂದ ಧಾರವಾಡದ ಗೋದಾಮಿನಲ್ಲೇ ಪುಡಿ ದಾಸ್ತಾನು ಮಾಡಲಾಗಿದೆ. ನಿಗದಿತ ಅವಧಿಯೊಳಗೆ ಮಾರಾಟ ಮಾಡದಿದ್ದರೆ, ಅದು ಹಾಳಾಗುವ ಸಾಧ್ಯತೆಯೂ ಇದೆ.

‘ಪ್ರತಿದಿನ 300 ಕ್ವಿಂಟಲ್‌ ಹಾಲಿನ ಪುಡಿ ತಯಾರಿಕೆ ಸಾಮರ್ಥ್ಯದ ಘಟಕ ಧಾಮುಲ್‌ನಲ್ಲಿ ಇದೆ. ವಿವಿಧ ಹಾಲು ಒಕ್ಕೂಟದವರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಉಳಿದ ಹಾಲನ್ನು ಪುಡಿ ತಯಾರಿಕೆಗೆ ಇಲ್ಲಿಗೆ ರವಾನಿಸುತ್ತಾರೆ. ಕೆನೆರಹಿತ (ಎ‌ಸ್‌ಎಂಪಿ) ಮತ್ತು ಕೆನೆಭರಿತ (ಡಬ್ಲುಎಂಪಿ) ಹಾಲಿನ ಪುಡಿ ತಯಾರಿಸಲಾಗುತ್ತದೆ. ಕೆನೆಭರಿತ ಹಾಲಿನ ಪುಡಿ ಕ್ಷೀರಭಾಗ್ಯ ಯೋಜನೆಗೆ ಬಳಕೆಯಾಗುತ್ತದೆ’ ಎಂದು ಧಾಮುಲ್‌ ನಿರ್ದೇಶಕ ವೀರೇಶ್‌ ತರಲಿ ತಿಳಿಸಿದರು.

‘ಹಾಲಿನ ಪುಡಿ ಪ್ರಮಾಣ ಹೆಚ್ಚಿದೆ. ಆದರೆ, ಬೇಡಿಕೆ ಕಡಿಮೆಯಾಗಿದೆ. ಧಾಮುಲ್‌ ಘಟಕದಲ್ಲಿ ಎರಡು ದಿನಕ್ಕೊಮ್ಮೆ 300 ಕ್ವಿಂಟಲ್‌ ಹಾಲಿನ ಪುಡಿ ಉತ್ಪಾದನೆ ಮಾಡಲಾಗುತ್ತದೆ. ಬೆಳಗಾವಿ, ಶಿವಮೊಗ್ಗ ಒಕ್ಕೂಟಗಳ ಹಾಲಿನ ಪುಡಿ ಹೆಚ್ಚು ಉಳಿದಿದೆ’ ಎಂದು ವಿವರಿಸಿದರು.

ಒಂದಿಷ್ಟು ಬಳಸಿದ್ದೇವೆ:

 ‘ಬೆಳಗಾವಿ ಹಾಲು ಒಕ್ಕೂಟದಲ್ಲಿ (ಬೆಮುಲ್‌) ಪ್ರತಿದಿನ 1.80 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಈ ಪೈಕಿ 85 ಸಾವಿರ ಲೀಟರ್‌ ಮಾರಾಟವಾಗುತ್ತದೆ. ಇದರೊಂದಿಗೆ ಉಪ ಉತ್ಪನ್ನ ತಯಾರಿಸುತ್ತೇವೆ. ಉಳಿದ 40 ಸಾವಿರದಿಂದ 45 ಸಾವಿರ ಲೀಟರ್‌ ಹಾಲನ್ನು ಪುಡಿ ಮಾಡಲು ಧಾರವಾಡಕ್ಕೆ ಕಳುಹಿಸುತ್ತೇವೆ. ದರ ಕುಸಿತದಿಂದ 3 ಸಾವಿರ ಕ್ವಿಂಟಲ್‌ ಪುಡಿ ಉಳಿದಿತ್ತು. ಈಗ ಒಂದಿಷ್ಟು ಬಳಸಿಕೊಂಡಿದ್ದೇವೆ’ ಎಂದು ಬೆಮುಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಉಳಿಕೆಯಾಗಿರುವುದು ಎಷ್ಟು?
ಧಾಮುಲ್‌ ಗೋದಾಮಿನಲ್ಲಿ ಅಕ್ಟೋಬರ್ 3ರಂದು 3,854 ಕ್ವಿಂಟಲ್‌ ಹಾಲಿನ ಪುಡಿ ಮಾರಾಟವಾಗದೆ ಉಳಿದಿದೆ. ಈ ಪೈಕಿ ಶಿವಮೊಗ್ಗ ಒಕ್ಕೂಟದಿಂದ ಕಳುಹಿಸಿದ ಹಾಲಿನಿಂದ ತಯಾರಿಸಿದ 1,671 ಕ್ವಿಂಟಲ್‌ ಹಾಲಿನ ಪುಡಿ, ಬೆಳಗಾವಿ ಒಕ್ಕೂಟದ 1,313 ಕ್ವಿಂಟಲ್‌ ಹಾಲಿನ ಪುಡಿ ಇದೆ. ಉಳಿದಂತೆ ಬಳ್ಳಾರಿ ಒಕ್ಕೂಟದ 461 ಕ್ವಿಂಟಲ್‌, ಹಾವೇರಿ ಒಕ್ಕೂಟದ 370 ಕ್ವಿಂಟಲ್‌, ಧಾರವಾಡ ಒಕ್ಕೂಟದ 26 ಕ್ವಿಂಟಲ್‌, ಕಲಬುರಗಿ ಒಕ್ಕೂಟದ 10.9 ಕ್ವಿಂಟಲ್‌ ಮತ್ತು ವಿಜಯಪುರ ಒಕ್ಕೂಟದ 8 ಕೆ.ಜಿ ಪುಡಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.