ADVERTISEMENT

ಹುಬ್ಬಳ್ಳಿ | ಬೆಳಕಿನ ಹಬ್ಬ: ಕಳೆಗಟ್ಟಿದ ಮಾರುಕಟ್ಟೆ

ಗೌರಮ್ಮ ಕಟ್ಟಿಮನಿ
Published 11 ನವೆಂಬರ್ 2023, 4:45 IST
Last Updated 11 ನವೆಂಬರ್ 2023, 4:45 IST
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ದೀಪಾವಳಿ ಅಂಗವಾಗಿ ಜನರು ಆಕಾಶ ಬುಟ್ಟಿ ಖರೀದಿಸಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ದೀಪಾವಳಿ ಅಂಗವಾಗಿ ಜನರು ಆಕಾಶ ಬುಟ್ಟಿ ಖರೀದಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ನಗರದ ದುರ್ಗದಬೈಲ್, ಜನತಾ ಬಜಾರ ಹಾಗೂ ಹಳೇ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಸಂಭ್ರಮ ಕಳೆಗಟ್ಟಿದೆ.

ಎತ್ತ ನೋಡಿದರೂ ಆಕರ್ಷಿಸುವ ತರಹೇವಾರಿ ಆಕಾಶ ಬುಟ್ಟಿಗಳು, ಗಮನ ಸೆಳೆಯುವ ವಿದ್ಯುತ್ ದೀಪಗಳು, ವಾಸನೆ ಬೀರದಿದ್ದರೂ ಖರೀದಿಗೆ ಪ್ರೇರೆಪಿಸುವ ಪ್ಲ್ಯಾಸ್ಟಿಕ್ ಹೂಗಳು, ಅಂಗಳ ಅಂದಗೊಳಿಸುವ ಬಣ್ಣ ಬಣ್ಣದ ರಂಗೋಲಿ... ಹೀಗೆ ಹತ್ತು ಹಲವು ಆಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಜನ ಖರೀದಿಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ಹತ್ತು ದಿನಕ್ಕೂ ಮೊದಲೇ ದುರ್ಗದ ಬೈಲ್‍ನ ಕೇಂದ್ರ ವೃತ್ತದಲ್ಲಿ ಹತ್ತಾರು ಮಳಿಗೆಗಳನ್ನು ಹಾಕಲಾಗುತ್ತದೆ. ಅದರ ಎದುರು ಮಣ್ಣಿನ ಹಣತೆ, ಗಾಜಿನ ಹಣತೆ ಸೇರಿ ವಿಭಿನ್ನ ವಿನ್ಯಾಸದ ದೀಪ ಬೆಳಗಿಸುವ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಜೊತೆಗೆ ಸುಗಂಧ ಬೀರುವ ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಗುಲಾಬಿ, ಸೂರ್ಯಕಾಂತಿ ಹೀಗೆ ತರಹೇವಾರಿ ಹೂಗಳು ಹೆಂಗಳೆಯರನ್ನು ಸೆಳೆಯುತ್ತಿವೆ.

ADVERTISEMENT

‘ಬಟ್ಟೆ, ಕಟ್ಟಿಗೆ, ಮಿಂಚಿನ ಹಾಳೆ, ದಾರದಿಂದ ತಯಾರಿಸಿದ ನೂರಾರು ವಿಭಿನ್ನ ಶೈಲಿಯ ಆಕಾಶಬುಟ್ಟಿಗಳನ್ನು ಹುಬ್ಬಳ್ಳಿಯ ಸ್ಥಳೀಯ ಮಾರುಕಟ್ಟೆ ಹಾಗೂ ಮುಂಬೈ, ದೆಹಲಿ, ಕಲ್ಕತ್ತಾ ಮತ್ತು ರಾಜಸ್ಥಾನದಿಂದ ತರಿಸಲಾಗಿದೆ. ಗಾತ್ರಕ್ಕೆ ತಕ್ಕಂತೆ ₹ 150 ರಿಂದ ₹ 3 ಸಾವಿರದವರೆಗೆ ಮಾರುತ್ತೇವೆ. ಈ ಬಾರಿ 3ಡಿ ಹಾಗೂ ಎಲ್‍ಇಡಿ ಆಕಾಶಬುಟ್ಟಿಗಳು ಹೊಸದಾಗಿದ್ದು ಜನರು ಉತ್ಸುಕತೆಯಿಂದ ಖರೀದಿಸುತ್ತಿದ್ದಾರೆ’ ಎಂದು ದುರ್ಗದಬೈಲ್‍ನ ವ್ಯಾಪಾರಿ ವಸೀಂ ಅಬ್ದುಣ್ಣವರ ತಿಳಿಸಿದರು.

‘ಲೈಟಿನ ಸರಗಳು ₹100 ರಿಂದ ₹ 800ದವರೆಗೆ ಹಾಗೂ ಮಳಿಗೆ ಮತ್ತು ಮನೆ ಅಲಂಕಾರಕ್ಕೆ ಮಿನಿ ಆಕಾಶ ದೀಪಗಳು, ಮಿಂಚಿನ ಚೆಂಡು, ಥರ್ಮಕೋಲ್‍ನಿಂದ ತಯಾರಿಸಿದ ದೀಪಾವಳಿ ಶುಭಾಶಯ ಹೀಗೆ ಹಲವು ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಎರಡು ದಿನ ಮಳೆಯಾಗಿದ್ದರಿಂದ ವ್ಯಾಪಾರ ಸಾಧಾರಣವಾಗಿತ್ತು. ಹಬ್ಬಕ್ಕೆ ಎರಡು ದಿನ ಇರುವಾಗ ವ್ಯಾಪಾರ ಚೆನ್ನಾಗಿ ಆಗಬಹುದೆಂಬ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

‘ಹಬ್ಬದ ಮುಖ್ಯ ಆಕರ್ಷಣೆ ಬಾಗಿಲ ತೋರಣಗಳು ಸಹ ಹೆಚ್ಚು ಮಾರಾಟವಾಗುತ್ತಿವೆ. ಗುಣಮಟ್ಟ ಹಾಗೂ ವಿನ್ಯಾಸಕ್ಕೆ ತಕ್ಕಂತೆ ₹ 30 ರಿಂದ ₹900 ದವರೆಗೆ ದರ ನಿಗದಿಪಡಿಸಲಾಗಿದೆ. ಮುತ್ತಿನ ತೋರಣಗಳು ಕೊಂಚ ದುಬಾರಿ ಆಗಿದ್ದರಿಂದ ಖರೀದಿಸುವವರ ಸಂಖ್ಯೆ ಕಡಿಮೆಯಿರುತ್ತದೆ. ಪ್ಲ್ಯಾಸ್ಟಿಕ್ ಹೂವಿನ ಮಾಲೆಗಳು ಜೋಡಿಗೆ ₹ 100 ರಿಂದ ₹ 450 ದವರೆಗೆ ಮಾರಲಾಗುತ್ತಿದೆ’ ಎಂದು ವ್ಯಾಪಾರಿ ಸೋಮಶೇಖರ್ ಪಪ್ಪತಿ ಮಾಹಿತಿ ನೀಡಿದರು.

ನೀರಿನ ದೀಪಕ್ಕೆ ಹೆಚ್ಚು ಬೇಡಿಕೆ

ಎಣ್ಣೆಯ ಬದಲು ನೀರು ಹಾಕಿದರೆ ಬೆಳಗುವ ದೀಪ ಮಾರುಕಟ್ಟೆಗೆ ಬಂದಿದ್ದು ಬೇಡಿಕೆ ಹೆಚ್ಚಾಗಿದೆ. ಗಾತ್ರ ಹಾಗೂ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದ್ದು ಚಿಕ್ಕದು ₹ 100ಕ್ಕೆ ನಾಲ್ಕರಂತೆ ಹಾಗೂ ತುಸು ದೊಡ್ಡದು ಮತ್ತು ಆಲಂಕಾರಿಕ ದೀಪ ₹ 100ಕ್ಕೆ ಎರಡರಂತೆ ಮಾರಾಟವಾಗುತ್ತಿವೆ. ಜೊತೆಗೆ ಶೆಲ್ ದೀಪಗಳು ₹30ರಿಂದ ₹100 ದವರೆಗೆ ಹಾಗೂ ಬೆಳಕಿನೊಂದಿಗೆ ಸುವಾಸನೆಯನ್ನು ಬೀರುವ ‘ಸ್ಮೆಲ್ ಕ್ಯಾಂಡಲ್ಸ್’ ₹ 80ಕ್ಕೆ ಒಂದರಂತೆ ಮಾರಲಾಗುತ್ತಿದೆ. ಮನೆಯ ತಾರಸಿ ಕಿಟಕಿ ಚೌಕಟ್ಟುಗಳನ್ನು ಚಂದಗೊಳಿಸುವ ಹ್ಯಾಂಗಿಂಗ್ ದೀಪಗಳು ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿವೆ ಎನ್ನುತ್ತಾರೆ ವ್ಯಾಪಾರಿ ತನ್ವೀರ್ ದೇವರ್.

ಕಳೆದ ವರ್ಷಕ್ಕಿಂತ ಈ ವರ್ಷ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜೊತೆಗೆ ಹೊಸ ವಿನ್ಯಾಸದ ನೂರಾರು ಆಕಾಶಬುಟ್ಟಿಗಳು ಮಾರಾಟಕ್ಕೆ ಲಭ್ಯ ಇವೆ
ಶಾನವಾಜ್, ವ್ಯಾಪಾರಿ ದುರ್ಗದ ಬೈಲ್
ದೀಪಾವಳಿ ಅಂದ್ಮೇಲೆ ಆಕಾಶ ಬುಟ್ಟಿ ಇರಲೆಬೇಕು. ಕಳೆದ ವರ್ಷದ್ದು ಇದ್ದರೂ ಮಕ್ಕಳಿಗಾಗಿ ಹೊಸ ಆಕಾಶ ಬುಟ್ಟಿ ಖರೀದಿಸಿದ್ದೇನೆ.
ಜ್ಯೋತಿ ಎಸ್, ಹುಬ್ಬಳ್ಳಿ
ದೀಪಾವಳಿ ಸಮೀಪಿಸುತ್ತಿದ್ದು ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿತ್ತು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬಕ್ಕಾಗಿ ಜನರು ಪ್ಲ್ಯಾಸ್ಟಿಕ್ ಹೂವಿನ ಮಾಲೆಗಳನ್ನು ಖರೀದಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಮಾರಾಟಕ್ಕಿಟ್ಟಿರುವ ತರಹೇವಾರಿ ‌ದೀಪಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.