ಧಾರವಾಡ: ದೀಪಾವಳಿ ಆಚರಣೆಗೆ ಅಗತ್ಯವಿರುವ ಹೂವು, ಹಣ್ಣು, ಹಣತೆ, ಆಕಾಶಬುಟ್ಟಿ ಹಾಗೂ ಮನೆ ಆಲಂಕಾರಿಕ ವಸ್ತುಗಳ ಖರೀದಿಯ ಭರಾಟೆ ನಗರದ ಮಾರುಕಟ್ಟೆಯಲ್ಲಿ ಗುರುವಾರ ಜೋರಾಗಿತ್ತು.
ನಗರದ ಸುಭಾಷ ರಸ್ತೆ, ಟಿಕಾರೆ ರಸ್ತೆ ಹಾಗೂ ಮಾರುಕಟ್ಟೆಯಲ್ಲಿ ಮಣ್ಣಿನ ಹಣತೆಗಳನ್ನು ರಸ್ತೆ ಬದಿಯಲ್ಲಿ ಮಾರಾಟಕ್ಕೆ ಇಡಲಾಗಿತ್ತು. ತರಹೇವಾರಿ ವಿನ್ಯಾಸದ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು. ಚಿಕ್ಕ ಗಾತ್ರದ ಹಣತೆ ಪ್ರತಿ ಡಜನ್‍ಗೆ ₹40 ರಿಂದ ₹60, ಚಿತ್ತಾರದ ಹಣತೆಗಳು ₹50 ರಿಂದ ₹300ವರೆಗೆ ಮಾರಾಟ ಮಾಡಲಾಗುತ್ತಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೂವಿನ ದರ ಏರಿಕೆಯಾಗಿದ್ದು, ಚೆಂಡು ಹೂವು ಪ್ರತಿ ಕೆ.ಜಿ.ಗೆ ₹120, ಹಳದಿ ಸೇವಂತಿ ₹150, ಗುಲಾಬಿ ₹300, ಅಷ್ಟ್ರಾ ಹೂವು ₹300, ಸುಗಂಧಿ ₹300 ದರ ಇದೆ. ಮಲ್ಲಿಗೆ ಹೂವು ಮಾರಿಗೆ ₹60 ದರ ಇದೆ. ಸೇಬು ಪ್ರತಿ ಕೆ.ಜಿ.ಗೆ ₹160, ಏಲಕ್ಕಿ ಬಾಳೆಹಣ್ಣು ₹100, ಮೂಸಂಬಿ ₹120, ಕಪ್ಪು ದ್ರಾಕ್ಷಿ ₹120, ಪೇರಲೆ ₹100, ಸೀತಾಫಲ ₹180, ದಾಳಿಂಬೆ ₹200, ಬೂದುಗುಂಬಳ ₹100 ದರ ಇದೆ.
‘ಲಕ್ಷ್ಮಿಪೂಜೆ, ವಾಹನ, ಮಳಿಗೆಗಳ ಅಲಂಕಾರಕ್ಕೆ ಜನರು ಹೂವುಗಳನ್ನು ಖರೀದಿಸಿದರು. ಹೂವಿನ ದರ ಮಾಮೂಲಿ ದಿನಗಳಿಗಿಂತಲೂ ಹೆಚ್ಚಾಗಿತ್ತು. ಸೇವಂತಿಗೆ, ಚಂಡು ಹೂವು, ಮಲ್ಲಿಗೆ, ಗುಲಾಬಿ ಹೂವುಗಳಿಗೆ ಬೇಡಿಕೆ ಜಾಸ್ತಿಯಿತ್ತು. ಬೆಲೆ ಜಾಸ್ತಿಯಾದರೂ ಜನರು ಖರೀದಿಸುತ್ತಾರೆ’ ಎಂದು ಹೂವಿನ ವ್ಯಾಪಾರಿ ಮಹಬೂಬ ನಿಸ್ತೆ ‘ಪ್ರಜಾವಾಣಿ’ಗೆ ತಿಳಿಸಿದರು.
ದೀಪಾವಳಿ ಹಬ್ಬಕ್ಕೆ ಸಡಗರ ಹೆಚ್ಚಿಸುವುದಕ್ಕಾಗಿ ಕೆಲವರು ಹಸಿರು ಪಟಾಕಿಗಳನ್ನು ಖರೀದಿಸಿದರು. ಕಲಾಭವನ ಮೈದಾನದಲ್ಲಿ ಹತ್ತಾರು ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ 10ರಷ್ಟು ಹೆಚ್ಚಾಗಿದೆ. ಆದರೂ ಜನರ ಖರೀದಿಯ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ.
ಪಟಾಕಿ ಕೊಳ್ಳಲು ಜನರು ತಂಡೋಪತಂಡವಾಗಿ ಬರುತ್ತಿದ್ದರು. ಬಟ್ಟೆ ಅಂಗಡಿಗಳಲ್ಲಿಯೂ ಗ್ರಾಹಕರ ದಟ್ಟಣೆಯಿತ್ತು. ತರಕಾರಿ, ದಿನಸಿ ಮತ್ತು ಪೂಜೆಗೆ ಬೇಕಾಗುವ ಬಾಳೆಕಂದು, ವೀಳ್ಯದೆಲೆ, ತೆಂಗಿನಕಾಯಿ ಖರೀದಿ ಜೋರಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ.
ಮಳೆಯಿಂದ ಹೂವಿನ ಬೆಳೆಗಳು ಹಾಳಾಗಿವೆ. ಮಾರುಕಟ್ಟೆಗೆ ಪೂರೈಕೆಯಾಗುವ ಹೂವಿನ ಪ್ರಮಾಣ ಕಡಿಮೆಯಾಗಿದ್ದರಿಂದ ಬೆಲೆ ಹೆಚ್ಚಾಗಿದೆಮಹೇಶ ತೋಟದ ಗೋವನಕೊಪ್ಪ ಹೂವಿನ ವ್ಯಾಪಾರಿ
ದೀಪಾವಳಿ ಎಲ್ಲರ ಮನ-ಮನೆ ಬೆಳಗುವ ಹಬ್ಬ. ಈ ಬಾರಿ ಮಣ್ಣಿನ ಹಣತೆಗಳನ್ನು ಬೆಳಗಿಸಿ ಆಚರಿಸಲು ನಿರ್ಧರಿಸಿದ್ದೇವೆಸುಮಾ ಪಾಟೀಲ ಗ್ರಾಹಕಿ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.