ಹುಬ್ಬಳ್ಳಿ: ‘ರಾಜಕೀಯ ವ್ಯವಸ್ಥೆಯಲ್ಲಿ ಕೆಲ ಜನಪ್ರತಿನಿಧಿಗಳು ಪಕ್ಷಾಂತರ ಮಾಡುವುದು ಸಹಜ ಪ್ರಕ್ರಿಯೆ ಹಾಗೂ ಇದೊಂದು ದೌರ್ಭಾಗ್ಯವೂ ಆಗಿದೆ. ಸದ್ಯದ ಸ್ಥಿತಿಯಲ್ಲಿ ಯಾರೂ ನಮ್ಮ ಪಕ್ಷವನ್ನು ಬಿಟ್ಟು ಹೋಗುತ್ತಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್‘ ರೇಡಿಯೊ ಕಾರ್ಯಕ್ರಮದ 104ನೇ ಸಂಚಿಕೆಯ ಪ್ರಸಾರ ಕಾರ್ಯಕ್ರಮ ವೀಕ್ಷಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ರಾಜ್ಯದಲ್ಲಿ ನಾವು ಕನಿಷ್ಠ 22ರಿಂದ 23 ಸ್ಥಾನಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷದಿಂದ ಯಾರು ನನ್ನ ವಿರುದ್ಧ ಸ್ಪರ್ಧಿಸುತ್ತಾರೊ ಗೊತ್ತಿಲ್ಲ. ಯಾರಾದರೂ ಒಬ್ಬರು ನನ್ನ ವಿರುದ್ಧ ಸ್ಪರ್ಧಿಸಲೇ ಬೇಕಲ್ಲ’ ಎಂದು ಧಾರವಾಡ ಕ್ಷೇತ್ರದಿಂದ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿರುವುದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇಬ್ಬರು ಪ್ರಮುಖರು ಕಾಂಗ್ರೆಸ್ ಸೇರುತ್ತಾರೆ: ಲಾಡ್
ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್, ‘ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಎಸ್.ಐ.ಚಿಕ್ಕನಗೌಡ್ರ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ಇದೆ. ಈವರೆಗೆ ಯಾರೂ ನನ್ನನ್ನು ಸಂರ್ಪಕಿಸಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.