ADVERTISEMENT

ದೋಷಪೂರಿತ ನಂಬರ್ ಪ್ಲೇಟ್: ರಾಜ್ಯದಲ್ಲಿ 19,448 ಪ್ರಕರಣ ದಾಖಲು

ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ, ಕೊಡಗಿನಲ್ಲಿ ಕಡಿಮೆ

ನಾಗರಾಜ್ ಬಿ.ಎನ್‌.
Published 30 ಆಗಸ್ಟ್ 2024, 0:30 IST
Last Updated 30 ಆಗಸ್ಟ್ 2024, 0:30 IST
ನೋಂದಣಿ ಫಲಕದಲ್ಲಿ ನಂಬರ್‌ ಇಲ್ಲದ ಸ್ಕೂಟಿ
ನೋಂದಣಿ ಫಲಕದಲ್ಲಿ ನಂಬರ್‌ ಇಲ್ಲದ ಸ್ಕೂಟಿ   

ಹುಬ್ಬಳ್ಳಿ: ದೋಷಪೂರಿತ ನೋಂದಣಿ‌ ಸಂಖ್ಯೆ ಫಲಕ(ನಂಬರ್ ಪ್ಲೇಟ್) ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನ ಸವಾರರ ವಿರುದ್ಧ ಆಗಸ್ಟ್ 1 ರಿಂದ 22ರವರೆಗಿನ ಅವಧಿಯಲ್ಲಿ  ರಾಜ್ಯದಾದ್ಯಂತ ಕಾರ್ಯಚರಣೆ ನಡೆಸಿದ ಸಂಚಾರ ಪೊಲೀಸರು 19,448 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ₹25 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 9,684 ಪ್ರಕರಣ ಮತ್ತು ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಬೈಕ್, ಆಟೊ, ಟಂಟಂ, ಟ್ಯಾಕ್ಸಿ, ಕಾರು, ನೀರಿನ ಟ್ಯಾಂಕರ್, ಲಾರಿ, ಖಾಸಗಿ ಬಸ್‌‌ಗಳ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆಲ ವಾಹನಗಳ ನೋಂದಣಿ ಫಲಕ ತುಂಡಾಗಿದ್ದರೆ, ಇನ್ನೂ ಕೆಲ ವಾಹನಗಳ ನೋಂದಣಿ ಸಂಖ್ಯೆ ಫಲಕಗಳಲ್ಲಿ ಸಂಖ್ಯೆಗಳೇ ಅಳಿಸಿಹೋಗಿವೆ. ಬಹುತೇಕ ವಾಹನಗಳಲ್ಲಿ ನೋಂದಣಿ ಫಲಕಗಳ ಮೇಲೆ ಸಂಖ್ಯೆ ಬರೆಸದೇ ಸ್ಟಿಕ್ಕರ್ ಅಂಟಿಸಿದ್ದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.

ADVERTISEMENT

ವಾಣಿಜ್ಯ ಬಳಕೆಯ ವಾಹನಗಳು, ಇ–ಕಾಮರ್ಸ್‌ನ ಲಾಜಿಸ್ಟಿಕ್ ಡೆಲಿವರಿ ಬೈಕ್‌ಗಳು ಸಹ ದೋಷಪೂರಿತ ನೋಂದಣಿ‌ ಸಂಖ್ಯೆ ಫಲಕ ಅಳವಡಿಸಿಕೊಂಡಿವೆ. ಖಾಸಗಿ ವಾಹನಗಳು ಬಿಳಿ ಫಲಕ (ವೈಟ್ ಬೋರ್ಡ್), ವಾಣಿಜ್ಯ ವಾಹನಗಳು ಹಳದಿ ಫಲಕ (ಯೆಲ್ಲೊ ಬೋರ್ಡ್) ಹೊ‌ಂದಿರಬೇಕು. ಆದರೆ, ವಾಣಿಜ್ಯ ವ್ಯವಹಾರಕ್ಕೆ ಬಳಕೆಯಾಗುವ ವಾಹನಗಳಿಗೂ ಕೆಲವರು ಬಿಳಿ ಫಲಕ ಅಳವಡಿಸಿಕೊಂಡಿದ್ದಾರ

‘ಕೆಲ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆ ಪತ್ತೆ ಆಗುವುದಿಲ್ಲ. ಅದರಿಂದ ಆರೋಪಿ ಸುಲಭವಾಗಿ ಸಿಗುವುದಿಲ್ಲ. ರಾತ್ರಿ ವೇಳೆ ವ್ಹೀಲಿಂಗ್ ಮಾಡುವವರು, ಮನೆ, ಸರ ಕಳವು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುವವರು, ಅಕ್ರಮ ಚಟುವಟಿಕೆಗಳಿಗೆ ವಾಹನ ಬಳಸುವ ಬಹುತೇಕ ಮಂದಿ ದೋಷಪೂರಿತ ನೋಂದಣಿ ಸಂಖ್ಯೆ ಫಲಕ ಹೊಂದಿರುತ್ತಾರೆ’ ಎಂದು ಹುಬ್ಬಳ್ಳಿ ಉತ್ತರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ರಮೇಶ ಗೋಕಾಕ ಹೇಳುತ್ತಾರೆ.

‘ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಸಂಚರಿಸುವ ಶೇ 20ರಷ್ಟು ವಾಹನಗಳು ದೋಷಪೂರಿತ ನೋಂದಣಿ ಫಲಕಗಳನ್ನು ಹೊ‌ಂದಿವೆ. ಇದರಿಂದ ಸಂಚಾರ ನಿಯಮ ಉಲ್ಲ‌ಘನೆಯಲ್ಲದೆ, ಕೆಲ ಪ್ರಕರಣಗಳ ಆರೋಪಿಗಳ ಪತ್ತೆಗೂ ಹಿನ್ನಡೆಯಾಗುತ್ತಿದೆ. ಮೊದಲ ಬಾರಿಗೆ ₹100 ದಂಡ, ಪುನರಾವರ್ತನೆಯಾದರೆ ದುಪ್ಪಟ್ಟು ಆಗುತ್ತದೆ’ ಎಂದು ಪೊಲೀಸರು ತಿಳಿಸಿದರು.

ಹುಬ್ಬಳ್ಳಿಯಲ್ಲಿ ನೋಂದಣಿ ಸಂಖ್ಯೆ ಫಲಕವಿಲ್ಲದ ವಾಹನಗಳ ಸಂಚಾರ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ
ಅಲೋಕ್ ಕುಮಾರ್ ಎಡಿಜಿಪಿ ಸಂಚಾರ ವಿಭಾಗ

ಮೋಟಾರು ವಾಹನ ಕಾಯ್ದೆ ಮಾನದಂಡ ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ನೋಂದಣಿ‌ ಫಲಕದ ಮೇಲೆ‌ ಯಾವುದೇ ಬರಹ ಅಥವಾ ರೇಖಾಚಿತ್ರ ಇರಬಾರದು. ಕಾಯ್ದೆ ಸೂಚಿಸಿದಂತೆ  ಮಾನದಂಡ ಪಾಲನೆಯಾಗಬೇಕು. ಕರ್ನಾಟಕದಲ್ಲಿ ನೋಂದಣಿಗೊಂಡ  ವಾಹನಗಳು ಕೆಎ ಕೋಡ್ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ಕೋಡ್ ಹೊಂದಿರಬೇಕು. ನಂತರ ನೋಂದಣಿ ಸಂಖ್ಯೆಗಳು ಇರಬೇಕು. ಪದಗಳು ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳಲ್ಲಿದ್ದರೆ ಅಂಕಿಅಂಶಗಳು ಅರೇಬಿಕ್ ಶೈಲಿಯಲ್ಲಿರಬೇಕು. ಸರ್ಕಾರಿ ಇಲಾಖೆಗಳಿಗೆ ಸೇರಿದ ವಾಹನಗಳು ಸೇರಿ ಎಲ್ಲಾ ಬಗೆಯ ವಾಹನಗಳಿಗೂ ಈ ನಿಯಮ ಅನ್ವಯ. ಖಾಸಗಿ ವಾಹನಗಳ ನೋಂದಣಿ ಫಲಕವು ಬಿಳಿ ಹಿನ್ನೆಲೆ ಮತ್ತು ಕಪ್ಪು ಬಣ್ಣದ ಅಕ್ಷರ ವಾಣಿಜ್ಯ ವಾಹನಗಳು ಕಪ್ಪು ಅಕ್ಷರಗಳೊಂದಿಗೆ ಹಳದಿ ಹಿನ್ನೆಲೆ ಹೊಂದಿರಬೇಕು.

ಅಂಕಿ ಅಂಶ....

ದೋಷಪೂರಿತ ನೋಂದಣಿ ಸಂಖ್ಯೆ ಫಲಕ ಜಿಲ್ಲೆ/ಮಹಾನಗರ;ಪ್ರಕರಣ

ಬೆಂಗಳೂರು ನಗರ;9684

ಮೈಸೂರು;634

ಮಂಗಳೂರು;550

ಹುಬ್ಬಳ್ಳಿಧಾರವಾಡ;405

ಬೆಳಗಾವಿ;527

ಶಿವಮೊಗ್ಗ;494

ಚಿಕಮಗಳೂರು;445

ರಾಮನಗರ;35

ಕೊಡಗು;21 (2024 ಆಗಸ್ಟ್ 1ರಿಂದ ಆಗಸ್ಟ್‌ 22ರವರೆಗಿನ ಮಾಹಿತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.