ಧಾರವಾಡ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿಗಾಗಿ ಒತ್ತಾಯಿಸಿ ಏಳನೇ ಹಂತದ ಹೋರಾಟ ಆರಂಭಿಸಿದ್ದೇವೆ. ಸಮುದಾಯದ ವಕೀಲರ ಮೂಲಕ ಹೋರಾಟ ನಡೆಸಲು ನಿರ್ಧರಿಸಿದ್ದು, ಸೆ.22 ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಲಿರುವ ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್‌ನಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಒತ್ತಾಯಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ಅಧಿವೇಶನ ಸಂದರ್ಭದಲ್ಲಿ ವಕೀಲರು ಬೃಹತ್ ಪ್ರತಿಭಟನೆ ನಡೆಸುವುದು ಇತ್ಯಾದಿ ಕುರಿತು ಪರಿಷತ್‌ನಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು’ ಎಂದರು.
‘ಧಾರವಾಡದಲ್ಲಿ ಜಿಲ್ಲೆಯ ಪಂಚಮಸಾಲಿ ವಕೀಲರ ಸಭೆ ನಡೆಸಿ ಧಾರವಾಡ ಜಿಲ್ಲಾ ಲಿಂಗಾಯತ ಪಂಚಮಸಾಲಿ ವಕೀಲರ ಒಕ್ಕೂಟ ರಚಿಸಲಾಗಿದೆ. 21 ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಒಕ್ಕೂಟದ ಅಧ್ಯಕ್ಷರಾಗಿ ಸಿ.ಆರ್.ಮೆಣಸಿನಕಾಯಿ, ಉಪಾಧ್ಯಕ್ಷರಾಗಿ ಬಿ.ಪಿ.ಧನಶೆಟ್ಟಿ ಮತ್ತು ಮಹೇಶ್ವರಿ ಉಪ್ಪಿನ, ಕಾರ್ಯಾಧ್ಯಕ್ಷರಾಗಿ ಸಿ.ಎಸ್.ನೇಗಿನಾಳ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೇಶ ಎಂ ಹೆಬ್ಬಳ್ಳಿ, ಸಹಕಾರ್ಯದರ್ಶಿಯಾಗಿ ಎಸ್.ಎಸ್.ಕಮತರ ಹಾಗೂ ಖಜಾಂಚಿಯಾಗಿ ಎನ್.ಆರ್.ಮಟ್ಟಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ಅವರು ತಿಳಿಸಿದರು.
‘ಆ.29ರಂದು ವಿಜಯಪುರ ಜಿಲ್ಲಾ ವಕೀಲರ ಸಭೆ, 30ರಂದು ಕೊಪ್ಪಳ, ಕಲಬರುಗಿ ಜಿಲ್ಲೆಗಳ ವಕೀಲರ ಸಭೆ ನಡೆಯಲಿದೆ. ಸೆ.1ರಂದು ಕೂಡಲಸಂಗಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳಿಗೆ ರುದ್ರಾಕ್ಷಿ ಕಂಕಣ ಕಟ್ಟುವ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.
‘2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆದಿಲ್ಲ. ಕಳೆದ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಚರ್ಚೆ ಅವಕಾಶ ನೀಡಿಲ್ಲ. ಚರ್ಚೆಗೆ ಅವಕಾಶ ನೀಡುವಂತೆ ವಿಷಯ ಸಮುದಾಯದ ಶಾಸಕರು ಸ್ಪೀಕರ್ ಅವರನ್ನು ಕೇಳಿದ್ದರೋ? ಇಲ್ಲವೋ ಎಂಬ ಅನುಮಾನ ಮೂಡಿದೆ. ಸಮುದಾಯದ ಶಾಸಕರು ಧ್ವನಿ ಎತ್ತದಿರುವುದು ಸಮುದಾಯದ ಜನರಿಗೆ ನೋವು ತಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.