ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಆಟೊ ಸೇವೆ ಒದಗಿಸುವ ಓಲಾ, ಉಬರ್, ಯಾತ್ರಿ, ಜುಗನು ಮತ್ತಿತರ ಆ್ಯಪ್‌ಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿ ಉತ್ತರ ಕರ್ನಾಟಕ ಆಟೊರಿಕ್ಷಾ ಚಾಲಕರ ಸಂಘದಿಂದ ಇಲ್ಲಿನ ತಹಶೀಲ್ದಾರ್ ಕಚೇರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
‘ಆ್ಯಪ್ ಆಧಾರಿತ ಸೇವೆಗಳಿಗೆ ನಗರದಲ್ಲಿ ಅನುಮತಿ ಇಲ್ಲ. ಆದರೂ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಈಗಾಗಲೇ ಶಕ್ತಿ ಯೋಜನೆಯಿಂದಾಗಿ ಆಟೊ ಚಾಲಕರಿಗೆ ದುಡಿಮೆ ಇಲ್ಲದಂತಾಗಿದೆ. ಇನ್ನು ಇವರಿಗೆ ನಾವು ಅವಕಾಶ ನೀಡುವುದಿಲ್ಲ’ ಎಂದು ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
‘ಮಹಾನಗರ ವ್ಯಾಪ್ತಿಯಲ್ಲಿ 400ಕ್ಕೂ ಅಧಿಕ ಆಟೊ ನಿಲ್ದಾಣಗಳಿದ್ದು, ಅವುಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಬೇಕು. ಹುಬ್ಬಳ್ಳಿ ನಗರದಲ್ಲಿ ಐದು ಪ್ರಮುಖ ನಿಲ್ದಾಣಗಳನ್ನು ಪಾಲಿಕೆ ವತಿಯಿಂದ ನಿರ್ಮಿಸಬೇಕು ಎಂಬ ಜಿಲ್ಲಾಧಿಕಾರಿಗಳ ಈ ಹಿಂದಿನ ಆದೇಶವನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.
‘ಆಟೊ ಪರವಾನಗಿ ಅವಧಿ ನವೀಕರಿಸಲು ತಡವಾದರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಪ್ರತಿ ತಿಂಗಳಿಗೆ ₹50 ಮತ್ತು ಸತ್ಯ ಮಾಪನ ಇಲಾಖೆಯಲ್ಲಿ ಪರವಾನಗಿ ನವೀಕರಿಸುವುದು ತಡವಾದರೆ ಮೂರು ತಿಂಗಳಿಗೆ ₹75 ದಂಡ ವಿಧಿಸುವುದನ್ನು ನಿಲ್ಲಿಸಬೇಕು. ಟಾಟಾ ಏಸ್, ಟಂಟಂ, ಕ್ರೂಜರ್ ರೀತಿಯ ಖಾಸಗಿ ವಾಹನಗಳನ್ನು ನಗರದಿಂದ 5 ಕಿ.ಮೀ. ಹೊರಗೆ ನಿರ್ಬಂಧಿಸಬೇಕು. ನಗರದಲ್ಲಿನ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಬೇಕು’ ಎಂದೂ ಆಗ್ರಹಿಸಿದರು.
ನೀಲಿಜಿನ್ ರಸ್ತೆಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.