ಹುಬ್ಬಳ್ಳಿ: ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ತಯಾರಿಸುತ್ತಿರುವ ಸಾವಯವ ಗೊಬ್ಬರಕ್ಕೆ (ಕಾಂಪೋಸ್ಟ್) ಬೇಡಿಕೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಗೊಬ್ಬರಕ್ಕೆ ಬ್ರಾಂಡ್ ಸ್ಪರ್ಶ ನೀಡಲು ಪಾಲಿಕೆ ಮುಂದಾಗಿದೆ.
ಧಾರವಾಡದ ಹೊಸ ಯಲ್ಲಾಪುರದ ಘಟಕದಲ್ಲಿ ಮತ್ತು ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಂಪಗೇರಿಯಲ್ಲಿ ರುವ ವಿಲೇವಾರಿ ಘಟಕದಲ್ಲಿ ಗೊಬ್ಬರ ತಯಾರಾಗುತ್ತಿದೆ. ಇದುವರೆಗೆ ಅಂದಾಜು 50 ಟನ್ ಗೊಬ್ಬರ ಮಾರಾಟವಾಗಿದ್ದು, ಪಾಲಿಕೆಯ ಬೊಕ್ಕಸಕ್ಕೆ ₹1.50 ಲಕ್ಷ ಆದಾಯ ಬಂದಿದೆ.
ಸಿಗಲಿದೆ ಬ್ರಾಂಡ್ ಸ್ಪರ್ಶ
ಪಾಲಿಕೆಯ ಕಾಂಪೋಸ್ಟ್‌ಗೆ ರೈತರು, ವ್ಯಾಪಾರಿಗಳು, ಕಂಪನಿಗಳು ಹಾಗೂ ರೈತರ ಸಹಕಾರ ಸಂಘಗಳಿಂದಲೂ ಬೇಡಿಕೆ ಬಂದಿದೆ. ಇದರಿಂದಾಗಿ, ಪಾಲಿಕೆಯು ತನ್ನ ಗೊಬ್ಬರಕ್ಕೆ ಬ್ರಾಂಡ್ ಸ್ಪರ್ಶ ನೀಡಲು ಮುಂದಾಗಿದೆ.
‘ಎಚ್‌ಡಿಎಂಸಿ ಕಾಂಪೊಸ್ಟ್’ ಬ್ರಾಂಡ್ ಹೆಸರಲ್ಲಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಒಂದು ಕೆ.ಜಿ.ಗೆ ₹5ರಂತೆ, 25 ಕೆ.ಜಿ ಮತ್ತು 50 ಕೆ.ಜಿ ಬ್ಯಾಗ್‌ಗಳಲ್ಲಿ ನೀಡಲಾಗುತ್ತದೆ’ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಧಾರವಾಡದಲ್ಲಿ ನಿತ್ಯ 50 ಟನ್ ಮತ್ತು ಹುಬ್ಬಳ್ಳಿಯಲ್ಲಿ 170 ಟನ್ ಕಸವನ್ನು ಕಾಂಪೋಸ್ಟ್‌ಗಾಗಿ ಸಂಸ್ಕರಿಸಲಾಗುತ್ತಿದೆ. ಧಾರವಾಡದಲ್ಲಿ 150 ಟನ್ ಗೊಬ್ಬರ ಸಂಗ್ರಹವಿದ್ದರೆ, ಹುಬ್ಬಳ್ಳಿಯಲ್ಲಿ 30 ಟನ್ ಇದೆ. ಹಸಿ ಮತ್ತು ಒಣ ಕಸದ ಬೇರ್ಪಡಿಸುವಿಕೆಯಿಂದಿಡಿದು ವಿವಿಧ ಹಂತ ದಾಟಿ ಕಾಂಪೋಸ್ಟ್ ಗೊಬ್ಬರವಾಗಲು ಕನಿಷ್ಠ 56 ದಿನಗಳು ಬೇಕು’ ಎಂದರು.
ಕಾರ್ಮಿಕರ ಕೊರತೆ
ಅವಳಿ ನಗರದ ಎರಡೂ ಕಡೆಯ ಕಾಂಪೋಸ್ಟ್ ಘಟಕಗಳಲ್ಲಿ ಕೆಲಸ ಮಾಡಲು ಅಗತ್ಯ ಪ್ರಮಾಣದ ಕಾರ್ಮಿಕರ ಕೊರತೆ ಎದುರಾಗಿದೆ. ಎರಡೂ ಘಟಕಗಳಿಗೆ ತಲಾ 35 ಕಾರ್ಮಿಕರ ಅಗತ್ಯವಿದೆ. ಆದರೆ, ಈಗ ಎರಡೂ ಕಡೆ ಕೆಲಸ ಮಾಡುತ್ತಿರುವವರು ಕೇವಲ 10ರಿಂದ 15 ಮಾತ್ರ.
‘ಎರಡೂ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಟೆಂಡರ್ ಅಂತಿಮಗೊಂಡಿಲ್ಲ. ಈ ಕುರಿತ ಪ್ರಸ್ತಾವಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಕ್ಕಿಲ್ಲ. ಹಾಗಾಗಿ, ಹೊಸ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಅಲ್ಲಿಯವರೆಗೆ, ಪಾಲಿಕೆಯ ಸೀಮಿತ ಕಾರ್ಮಿಕರಿಂದ ಘಟಕದ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಸಂತೋಷ ಯರಂಗಳಿ ತಿಳಿಸಿದರು.
‘ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೆ ಉತ್ಪಾದನೆ ಜಾಸ್ತಿಯಾಗಲಿದೆ. ಆಗ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ ನಿಯಮ ಕಡ್ಡಾಯಗೊಳಿಸಲಾಗುವುದು. ಪಾಲಿಸದವರಿಂದ ತ್ಯಾಜ್ಯ ಪಡೆಯದಂತೆ ಪೌರ ಕಾರ್ಮಿಕರಿಗೆ ಸೂಚಿಸಲಾಗುವುದು. ಅಗತ್ಯ ಬಿದ್ದರೆ ದಂಡ ವಿಧಿಸಲಾಗುವುದು’ ಎಂದು ಹೇಳಿದರು.
ಸಿಸಿಟಿವಿ ಕ್ಯಾಮೆರಾ ನಿಗಾ
ಹುಬ್ಬಳ್ಳಿಯ ಕೆಂಪಗೇರಿ ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ತ್ಯಾಜ್ಯದಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ, ಘಟಕದ ಮೇಲೆ ದಿನದ ಇಪ್ಪತ್ತನಾಲ್ಕು ತಾಸು ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪಾಲಿಕೆ ಮುಂದಾಗಿದೆ.
‘ಘಟಕದಲ್ಲಿರುವ ತ್ಯಾಜ್ಯದಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು ಹೊಗೆ ಏಳುವುದು ಸಾಮಾನ್ಯ. ಆದರೆ, ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ, ಸ್ಮಾರ್ಟ್ ಸಿಟಿ ಯೋಜನೆಯವರು ಕ್ಯಾಮೆರಾ ಒದಗಿಸಲಿದ್ದಾರೆ’ ಎಂದು ಯರಂಗಳಿ ತಿಳಿಸಿದರು.
ಅಂಕಿ ಅಂಶ...
350 ಟನ್:ಅವಳಿ ನಗರದಲ್ಲಿ ನಿತ್ಯ ಸಂಗ್ರವಾಗುವ ತ್ಯಾಜ್ಯ
300 ಟನ್:ಹುಬ್ಬಳ್ಳಿ ಘಟಕದ ಕಾಂಪೋಸ್ಟ್ ಸಾಮರ್ಥ್ಯ
150 ಟನ್:ಧಾರವಾಡ ಘಟಕದ ಕಾಂಪೋಸ್ಟ್ ಸಾಮರ್ಥ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.