ADVERTISEMENT

ಧಾರವಾಡ: ರೈತರ ಪಹಣಿಯಲ್ಲಿ ನಮೂದಾಗಿರುವ ‘ವಕ್ಫ್‌’ ಹೆಸರು ತೆಗೆದು ಹಾಕಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 9:13 IST
Last Updated 30 ಅಕ್ಟೋಬರ್ 2024, 9:13 IST
   

ಧಾರವಾಡ: ಉಪ್ಪಿನಬೆಟಗೇರಿ ಗ್ರಾಮದ ಕೆಲ ರೈತರ ಪಹಣಿಯಲ್ಲಿ ‘ಜಮೀನು ವಕ್ಫ್‌ ಆಸ್ತಿಗೆ ಒಳಪಟ್ಟಿರುತ್ತದೆ’ ಎಂದು ನಮೂದಿಸಿರುವುದನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ, ಭಾರತ್‌ ಕಿಸಾನ್‌ ಸಂಘ ಸಹಿತ ವಿವಿಧ ಸಂಘಟನೆಗಳವರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಸರ್ಕಾರ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪಹಣಿ ಪ್ರದರ್ಶಿಸಿದರು.

‘ನಮ್ಮ ಪಿತ್ರಾರ್ಜಿತ ಆಸ್ತಿಯ ಪಹಣಿಯಲ್ಲಿ ‘ವಕ್ಫ್‌’ ಹೆಸರು ನಮೂದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಲೋಪ ಆಗಿದೆ. ಲೋಪ ಸರಿಪಡಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಉಪ್ಪಿನಬೆಟಗೇರಿಯ ರೈತ ಗಂಗಪ್ಪ ಜಾವಳಗಿ ಎಚ್ಚರಿಕೆ ನೀಡಿದರು.

ADVERTISEMENT

‘ಪಹಣಿಯಲ್ಲಿ ‘ವಕ್ಫ್‌’ ಹೆಸರು ನಮೂದಾಗಿರುವುದನ್ನು ತೆಗೆದು ಹಾಕುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರು ಲೋಪ ಎಸಗಿದ್ದಾರೆ’ ಎಂದು ಉಪ್ಪಿನಬೆಟಗೇರಿಯ ಮರಿಬಸಪ್ಪ ಮಸೂತಿ ಆರೋಪಿಸಿದರು.

ಭಾರತ್‌ ಕಿಸಾನ್‌ ಸಂಘದ ವಿವೇಕ ಮೋರೆ ಮಾತನಾಡಿ, ‘ವಕ್ಫ್‌ ಹೆಸರಿನಲ್ಲಿ ರೈತರ ಜಮೀನು ಕಬಳಿಸುವ ಹುನ್ನಾರ ನಡೆದಿದೆ. ರೈತರಿಗೆ ಬೆನ್ನಿಗೆ ಚೂರಿ ಹಾಕುವ ಸಂಚು ನಡೆದಿದೆ’ ಎಂದು ದೂರಿದರು.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಮಾತನಾಡಿ, ವಕ್ಫ್‌ ಹೆಸರು ನೋಂದಣಿ ಮಾಡುವಂತೆ ಜಮೀರ್‌ ಅಹಮದ್‌ ಒತ್ತಡ ಹೇರಿದ್ಧಾರೆ. ಜಮೀರ್‌ ಅವರು ಎರಡನೇ ಟಿಪ್ಪು ಮತ್ತು ಔರಂಗಜೇಬ್‌ ಎಂದರು.

ರೈತರ ಪಹಣಿಯಲ್ಲಿ ನಮೂದಿಸಿರುವ ‘ವಕ್ಫ್‌’ ಹೆಸರನ್ನು ವಾರದೊಳಗೆ ತೆಗೆದುಕೊಳ್ಳಬೇಕು. ಉಪವಿಭಾಗಾಧಿಕಾರಿ ಮತ್ತು ಮುತುವಲ್ಲಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

‘ನವೆಂಬರ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ವಕ್ಫ್‌ ಅಧಿಕಾರಿಗೆ ನೋಟಿಸ್‌ ನೀಡಲಾಗಿದೆ. ದಾಖಲೆ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ತಹಶೀಲ್ದಾರ್‌ ದೊಡ್ಡಪ‍್ಪ ಹೂಗಾರ ಅವರು ಪ್ರತಿಭಟನಾಕಾರರಿಗೆ ತಿಳಿಸಿದರು.

ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ್‌ ದೇಸಾಯಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.