ADVERTISEMENT

ಧಾರವಾಡ | ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನನೆಗುದಿಗೆ: ಅಭ್ಯರ್ಥಿಗಳಿಗೆ ಸಂಕಟ

ಕವಿವಿ ವ್ಯಾಪ್ತಿಯ ಮಾಧ್ಯಮಿಕ, ಪ್ರಾಯೋಗಿಕ ಪ್ರಾಥಮಿಕ ಶಾಲೆ

ಬಿ.ಜೆ.ಧನ್ಯಪ್ರಸಾದ್
Published 17 ನವೆಂಬರ್ 2024, 4:34 IST
Last Updated 17 ನವೆಂಬರ್ 2024, 4:34 IST
ಕರ್ನಾಟಕ ವಿಶ್ವವಿದ್ಯಾಲಯ (ಸಾಂಧರ್ಭಿಕ ಚಿತ್ರ)
ಕರ್ನಾಟಕ ವಿಶ್ವವಿದ್ಯಾಲಯ (ಸಾಂಧರ್ಭಿಕ ಚಿತ್ರ)   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಮಾಧ್ಯಮಿಕ ಶಾಲೆ (5ರಿಂದ 12ನೇ ತರಗತಿ) ಮತ್ತು ಪ್ರಾಯೋಗಿಕ ಪ್ರಾಥಮಿಕ ಶಾಲೆಗಳ (1ರಿಂದ 5ನೇ ತರಗತಿ) ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಅಧಿಸೂಚನೆ ಪ್ರಕಟಿಸಿ ವರ್ಷ ಕಳೆದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಸಹಾಯಕ ಶಿಕ್ಷಕರು, ಸಂಗೀತ ಶಿಕ್ಷಕರು, ವಿಶೇಷ ಶಿಕ್ಷಕರು, ಸಹಾಯಕ ಹೌಸ್‌ ಮಾಸ್ಟರ್‌ ಸೇರಿದಂತೆ ವಿವಿಧ 14 ಹುದ್ದೆಗಳ ನೇರ ನೇಮಕಾತಿಗೆ 2023ರ ಅಕ್ಟೋಬರ್‌ 17ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಈ ವರ್ಷ ಜೂನ್‌ನಲ್ಲಿ ಲಿಖಿತ ಪರೀಕ್ಷೆ (ಸಾಮಾನ್ಯ ಅಧ್ಯಯನ, ಭಾಷಾ ಸಾಮರ್ಥ್ಯ ಹಾಗೂ ವಿಷಯ ಪತ್ರಿಕೆ) ನಡೆಸಲಾಗಿದೆ.

ಅಭ್ಯರ್ಥಿಯು ಅರ್ಹತಾ ಕೋರ್ಸ್‌ನಲ್ಲಿ (ಸ್ನಾತಕ ಪದವಿ, ಬಿ.ಇಡಿ, ಡಿ.ಇಡಿ, ಟಿಇಟಿ...) ಪಡೆದ ಅಂಕ, ಲಿಖಿತ ಪರೀಕ್ಷೆ ಮತ್ತು ಬ್ಲ್ಯಾಕ್‌ಬೋರ್ಡ್‌ ಪರಿಣತಿ ಪ‍ರೀಕ್ಷೆ ಅಂಕ ಆಧರಿಸಿ ಮೆರಿಟ್‌ ಪಟ್ಟಿ ಸಿದ್ಧಪಡಿಸಬೇಕಿದೆ. ಆಯ್ಕೆ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಬ್ಲ್ಯಾಕ್‌ಬೋರ್ಡ್‌ ಪರಿಣತಿ ಪ‍ರೀಕ್ಷೆ ನಡೆಸಬೇಕಿದೆ.

ADVERTISEMENT

‘ಸಹಾಯಕ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿ, ಲಿಖಿತ ಪರೀಕ್ಷೆ ಬರೆದಿದ್ದೆ. ವಸ್ತು ನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳ ಕೀ ಉತ್ತರ ಪ್ರಕಟಿಸಲಾಗಿದೆ. ಆದರೆ, ವಿಷಯ ಜ್ಞಾನದ ವಿವರಣಾತ್ಮಕ ಉತ್ತರಗಳನ್ನು ಇನ್ನೂ ಪ್ರಕಟಿಸಿಲ್ಲ. ಬ್ಲ್ಯಾಕ್‌ ಬೋರ್ಡ್‌ ಪರಿಣತಿ ಪರೀಕ್ಷೆಯ ವೇಳಾಪಟ್ಟಿಯನ್ನೂ ಪ್ರಕಟಿಸಿಲ್ಲ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದು ಸಂಕಟ ತಂದೊಡ್ಡಿದೆ’ ಎಂದು ಅಭ್ಯರ್ಥಿಯೊಬ್ಬರು ಗೋಳು ತೋಡಿಕೊಂಡರು.

ಕರ್ನಾಟಕ ವಿಶ್ವವಿದ್ಯಾಲಯ ಅಮೃತ ಮಹೋತ್ಸವದ ಸಡಗರದಲ್ಲಿದೆ. ಕುಲಪತಿಯಾಗಿದ್ದ ಪ್ರೊ.ಕೆ.ಬಿ.ಗುಡಸಿ ಅವರು ಸೆಪ್ಟೆಂಬರ್‌ 25ರಂದು ನಿವೃತರಾಗಿದ್ದಾರೆ. ನೂತನ ಕುಲಪತಿ ನೇಮಕ ಆಗಿಲ್ಲ. ಪ್ರಭಾರ ಕುಲಪತಿ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನೇಮಕಾತಿ, ಕಾಮಗಾರಿ ಸೇರಿದಂತೆ ಕೆಲವಾರು ಪ್ರಕ್ರಿಯೆಗಳು ಸ್ಥಗಿತಗೊಂಡಿವೆ.

‘ಕುಲಪತಿ ನೇಮಕದ ಬಳಿಕ ಚಾಲನೆ’

‘ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿ‌ಯ ಮಾಧ್ಯಮಿಕ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೊಸ ಕುಲಪತಿ ನೇಮಕವಾದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಎ.ಚನ್ನಪ್ಪ ತಿಳಿಸಿದರು. ‘ಕುಲಪತಿ ಅವಧಿಯ ಕೊನೆಯ ಎರಡು ತಿಂಗಳಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಂತಿಲ್ಲವೆಂದು ರಾಜ್ಯಪಾಲರಿಂದ ಆದೇಶ ಬಂದಿತ್ತು. ಈ ಹಿಂದಿನ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಪ್ರಮುಖ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು. ಆದರೆ ರಾಜ್ಯಪಾಲರು ಅದಕ್ಕೆ ಅನುಮತಿ ನೀಡಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.