ADVERTISEMENT

ವಂದೇ ಭಾರತ್‌ ರೈಲು ಬೆಳಗಾವಿಗೆ ವಿಸ್ತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:33 IST
Last Updated 18 ಜೂನ್ 2024, 15:33 IST
ಹುಬ್ಬಳ್ಳಿಯ ರೇಲ್‌ ಸೌಧದಲ್ಲಿ ಮಂಗಳವಾರ ರಾಜ್ಯಸಭಾ ಸದಸ್ಯ ವೀರಣ್ಣ ಕಡಾಡಿ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿದರು
ಹುಬ್ಬಳ್ಳಿಯ ರೇಲ್‌ ಸೌಧದಲ್ಲಿ ಮಂಗಳವಾರ ರಾಜ್ಯಸಭಾ ಸದಸ್ಯ ವೀರಣ್ಣ ಕಡಾಡಿ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿದರು   

ಹುಬ್ಬಳ್ಳಿ: ನಗರದ ಗದಗ ರಸ್ತೆಯ ರೇಲ್‌ ಸೌಧದಲ್ಲಿ ರಾಜ್ಯಸಭಾ ಸದಸ್ಯ ವೀರಣ್ಣ ಕಡಾಡಿ ನೇತೃತ್ವದಲ್ಲಿ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ್‌ ಶ್ರೀವಾಸ್ತವ್‌ ಅವರು ಮಂಗಳವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬೆಳಗಾವಿ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ವಂದೇ ಭಾರತ್‌ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ಇರುವ ತೊಡಕುಗಳು ಹಾಗೂ ನಿವಾರಣೆಗಳ ಕುರಿತು ಚರ್ಚಿಸಲಾಯಿತು. ಆದಷ್ಟು ಬೇಗ ಅಲ್ಲಿಯವರೆಗೆ ರೈಲು ಓಡಿಸಲು ಇಲಾಖೆ ಮುಂದಾಗಬೇಕು ಎಂದು ವೀರಣ್ಣ ಕಡಾಡಿ ಒತ್ತಾಯಿಸಿದರು.

ಧಾರವಾಡ, ಕಿತ್ತೂರು ಮಾರ್ಗವಾಗಿ ಬೆಳಗಾವಿವರೆಗಿನ ನೂತನ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ  ಸಾಗಿದ್ಡು, ತ್ವರಿತವಾಗಿ ಪೂರ್ಣಗೊಳಿಸಬೇಕು. ಬೆಳಗಾವಿ ಮೀರಜ್‌ ನಡುವೆ ಈ ಹಿಂದೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲುಗಳನ್ನು ಪುನಃ ಆರಂಭಿಸಬೇಕು. ಪಂಢರಪುರ ಹಾಗೂ ರಾಜಸ್ಥಾನದ ಕಡೆಗೆ ತೆರಳುವ ರೈಲುಗಳನ್ನು ಖಾನಾಪುರ, ಘಟಪ್ರಭಾ, ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಕ್ರಮಕೈಕೊಳ್ಳಲು ತೀರ್ಮಾನಿಸಲಾಯಿತು.

ADVERTISEMENT

ಬೆಳಗಾವಿ ಜಿಲ್ಲೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿದ್ದು, ಈ ಭಾಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಬೈ, ದೆಹಲಿ, ತಿರುಪತಿ, ಮಂಗಳೂರು, ಹೈದರಾಬಾದ್, ಬೀದರ್ ಹಾಗೂ ಸೊಲ್ಲಾಪುರ ನಗರಗಳನ್ನು ಸಂಪರ್ಕಿಸುವ ನೂತನ ರೈಲುಗಳನ್ನು ಪ್ರಾರಂಭಿಸುವ ಕುರಿತು ಚರ್ಚಿಸಲಾಯಿತು.

ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ, ಸುನೀಲ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.