ADVERTISEMENT

ಹುಬ್ಬಳ್ಳಿ: ಚುನಾವಣಾ ಪೂರ್ವ ಸಮೀಕ್ಷೆ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 15:56 IST
Last Updated 3 ಜೂನ್ 2024, 15:56 IST

ಹುಬ್ಬಳ್ಳಿ: ‘ಚುನಾವಣಾ ಪೂರ್ವ ಸಮೀಕ್ಷೆಯು ಜನರ ದಾರಿತಪ್ಪಿಸುತ್ತದೆ. ಇಂಥ ಸಮೀಕ್ಷೆಗಳಿಗೆ ಚುನಾವಣಾ ಆಯೋಗವು ಅವಕಾಶ ನೀಡದೇ, ರದ್ದುಪಡಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಶಿವಾನಂದ ಮುತ್ತಣ್ಣವರ ಆಗ್ರಹಿಸಿದರು.

‘ಮತದಾರರು ಯಾರ ಪರ ಮತ ಚಲಾಯಿಸಿದ್ದಾರೆ ಅಥವಾ ಇಲ್ಲವೇ ಎಂಬುದನ್ನು ಬಹಿರಂಗವಾಗಿ ತಿಳಿಪಡಿಸುವ ಹಕ್ಕು ಯಾರಿಗೂ ಇಲ್ಲ. ಮತದಾನ ಎಂಬುದು ಗುಪ್ತ ಪ್ರತಿಕ್ರಿಯೆಯಾಗಿದ್ದು, ವಿವಿಧ ಸಮೀಕ್ಷಾ ಸಂಸ್ಥೆಗಳು ಅಂದಾಜಿನ ಮೇಲೆ ಸಮೀಕ್ಷೆ ರೂಪದಲ್ಲಿ ಫಲಿತಾಂಶ ಘೋಷಣೆ ಸರಿಯಲ್ಲ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನೂರಾರು ಟಿ‌.ವಿ. ಚಾನೆಲ್‌ಗಳ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಪಡೆದು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳುತ್ತಿವೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಜನರನ್ನು ದಿಕ್ಕುತಪ್ಪಿಸುವ ಇಂತಹ ಸಮೀಕ್ಷೆಗೆ ಚುನಾವಣಾ ಆಯೋಗ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

‘ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಪ್ರಲ್ಹಾದ ಜೋಶಿ ಅವರು ಹೇಳಿದ್ದಾರೆ. ಆದರೆ, ಅವರು ಎರಡು ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಫಲಿತಾಂಶದ ನಂತರ ಅವರು ತೀರ್ಥಯಾತ್ರೆ ಕೈಗೊಳ್ಳಲು ಯೋಜನೆ ರೂಪಿಸಬಹುದು’ ಎಂದು ವ್ಯಂಗ್ಯವಾಡಿದರು.

ಪ್ರಮುಖರಾದ ಪಿ.ವಿ.‌ಪಡೆಸೂರು, ನರೇಶ ಮಲ್ನಾಡ, ಯಲ್ಲಪ್ಪ ಕು‌ದಗೋಳ, ಯಂಕಟ ಸಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.