ಹುಬ್ಬಳ್ಳಿ: ‘ಮೊದಲ ಸ್ಥಾನ ಗಳಿಸಲೇಬೇಕು ಎಂದು ಪೋಷಕರು ಯಾವತ್ತೂ ಒತ್ತಡ ಹೇರಲಿಲ್ಲ. ಅಗತ್ಯವಿದ್ದಾಗಲೆಲ್ಲ ಹಣ ಕೊಟ್ಟು ಬೆನ್ನು ತಟ್ಟಿದರು; ತಮ್ಮ ಕಷ್ಟಗಳನ್ನು ತೋರುಗೊಡದೆ ಚೆನ್ನಾಗಿ ಓದು ಎಂದು ಹುರಿದುಂಬಿಸಿದರು. ಅದರ ಫಲವೇ ಇದು...’
ಕೊರಳಲ್ಲಿ ಹಾಕಿಕೊಂಡಿದ್ದ ಚಿನ್ನದ ಪದಕ ಗಟ್ಟಿಯಾಗಿ ಹಿಡಿದು ಹೀಗೆ ಭಾವುಕರಾಗಿದ್ದು ರೈತ ದಂಪತಿ ಗುರುಲಿಂಗಪ್ಪ ಹಾಗೂ ಅನುಸೂಯಾ ಅವರ ಪುತ್ರ ವಿನಾಯಕ ಗೊಂದಿ. ಅವರು ನಗರದ ಬಿವಿಬಿ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮಗ ಪದಕ ಸ್ವೀಕರಿಸುವುದನ್ನು ನೋಡಲು ಕುಟುಂಬದವರೆಲ್ಲರೂ ಬಂದಿದ್ದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ವಿನಾಯಕನಿಗೆ ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ (ಐಇಎಸ್) ಪರೀಕ್ಷೆ ಪಾಸು ಮಾಡುವ ಗುರಿ. ಇದಕ್ಕಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
‘ನನಗೆ ಚಿನ್ನದ ಪದಕ ಬಂದ ಖುಷಿಗಿಂತ ಕುಟುಂಬದವರ ಎದುರು ಸುಧಾಮೂರ್ತಿ ಮೇಡಂ ಅವರಿಂದ ಪದಕ ಪಡೆದಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಅವರಂತೆ ದೊಡ್ಡ ವ್ಯಕ್ತಿಯಾಗಿ ಬೇರೆಯವರಿಗೂ ಸಹಾಯ ಮಾಡುವ ಆಸೆಯಿದೆ. ಹಣ ಗಳಿಸಬೇಕು ಎನ್ನುವ ತುಡಿತಕ್ಕಿಂತ ಅಸಹಾಯಕರಿಗೆ ನೆರವಾಗುವ ಗುರಿಯಿದೆ’ ಎಂದು ವಿನಾಯಕ ಭವಿಷ್ಯದ ಆಸೆ ಹಂಚಿಕೊಂಡರು.
‘ಮಗನ ಸಾಧನೆ ಕಂಡು ಖುಷಿಯಾಗಿದೆ. ಕಾಲಕಾಲಕ್ಕೆ ಮಳೆಯಾಗದ ಕಾರಣ ಕೃಷಿ ಚಟುವಟಿಕೆ ಕೂಡ ಕಷ್ಟವಾಗುತ್ತಿದೆ. ನಮ್ಮ ಕಷ್ಟ ನಮಗಿರಲಿ ಎಂದು ಮಗನಿಗೆ ನೆರವಾದೆವು. ಮಗ ನಮ್ಮ ನಿರೀಕ್ಷೆ ಉಳಿಸಿಕೊಂಡಿದ್ದಾನೆ’ ಎಂದು ಗುರುಲಿಂಗಪ್ಪ ಹಾಗೂ ಅನಸೂಯಾ ಸಂತಸ ವ್ಯಕ್ತಪಡಿಸಿದರು.
2017ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಮಹಾಂತೇಶ್ ಬೆಳ್ಳಿ ಪದಕ ಪಡೆದರು. ಇವರ ತಂದೆ ಚಂದ್ರಶೇಖರ ನೇಕಾರರು.
‘ಅಸಹಾಯಕ ಜನರಿಗೆ ಸಹಾಯ ಮಾಡಬೇಕು. ಎಂಟರ್ ಪ್ರೈನರ್ ಆಗಬೇಕು ಎನ್ನುವ ಆಸೆಯಿದೆ. ಉದ್ಯೋಗ ಹುಡುಕುವುದಕ್ಕಿಂತ, ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ಆಸಕ್ತಿಯಿದೆ’ ಎಂದು ಮಹಾಂತೇಶ ಹೇಳಿದರು.
ಅವರ ತಂದೆ ಚಂದ್ರಶೇಖರ ‘ನೇಕಾರಿಕೆ ಮಾಡುವುದರಲ್ಲಿಯೇ ನಮ್ಮ ಬದುಕು ಕಳೆದು ಹೋಗಿದೆ. ಮಗನ ಬದುಕು ಕೂಡ ಹಾಗೆ ಆಗಬಾರದೆಂದು ಓದಿಸಿದೆವು. ನಿರೀಕ್ಷೆ ನಿಜವಾಗಿದೆ. ಎಷ್ಟೇ ಕಷ್ಟ ಬಂದರೂ ಮಗನಿಗೆ ಇನ್ನಷ್ಟು ಓದಿಸಲು ಸಿದ್ಧರಿದ್ದೇವೆ’ ಎಂದರು. ಇದಕ್ಕೆ ಮಹಾಂತೇಶ ತಾಯಿ ಭಾರತಿ ದನಿಗೂಡಿಸಿದರು.
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದಿರುವ ಹುಬ್ಬಳ್ಳಿಯ ಸಿಂಧು ಬಾಲಚಂದ್ರ ಹೆಗ್ಡೆ ‘ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದಿದ್ದೆ. ಮೊದಲಿನಿಂದಲೂ ಸಿಎಸ್‌ನಲ್ಲಿ ಆಸಕ್ತಿಯಿತ್ತು. ಇದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆಯಿದೆ. ಸದ್ಯಕ್ಕೆ ಹೈದರಾಬಾದ್‌ನಲಲ್ಲಿ ಐಐಐಟಿಯಲ್ಲಿ ಎಂ.ಎಸ್. ಮಾಡುತ್ತಿದ್ದೇನೆ’ ಎಂದರು.
ಹೀಗೆ ಕಷ್ಟಪಟ್ಟು ಓದಿ ಸಾಧನೆ ಮಾಡಿದ ತಮ್ಮ ಮಕ್ಕಳನ್ನು ನೋಡಿದ ಪೋಷಕರಲ್ಲಿಯೂ ಸಂಭ್ರಮ ಮನೆ ಮಾಡಿತ್ತು. ಕೃಷಿಕರ, ನೇಕಾರರ, ಶಿಕ್ಷಕರ ಮಕ್ಕಳು ಗೋನು ತೊಟ್ಟು, ಕೊರಳಲ್ಲಿ ಪದಕ ಹಾಕಿಕೊಂಡು ಪರಸ್ಪರ ಅಭಿನಂದಿಸಿಕೊಳ್ಳುತ್ತಿದ್ದ ಚಿತ್ರಣ ಕಂಡು ಕಿರಿಯ ವಿದ್ಯಾರ್ಥಿಗಳಲ್ಲಿ ನಾವೂ ಇದೇ ರೀತಿಯ ಸಾಧನೆ ಮಾಡಬೇಕು ಎನ್ನುವ ತುಡಿತ ಕಂಡು ಬರುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.