ADVERTISEMENT

ಧಾರವಾಡ | ಅಭಿವೃದ್ಧಿ ವಂಚಿತ ಅರವಟಗಿ ಗ್ರಾಮ ಪಂಚಾಯ್ತಿ

ರಾಜಶೇಖರ ಸುಣಗಾರ
Published 9 ನವೆಂಬರ್ 2022, 6:24 IST
Last Updated 9 ನವೆಂಬರ್ 2022, 6:24 IST
ಅಳ್ನಾವರ ತಾಲ್ಲೂಕಿನ ಅರವಟಗಿ ಗ್ರಾಮ ಪಂಚಾಯ್ತಿ ಕಟ್ಟಡ ಶಿಥಿಲಗೊಂಡಿದೆ
ಅಳ್ನಾವರ ತಾಲ್ಲೂಕಿನ ಅರವಟಗಿ ಗ್ರಾಮ ಪಂಚಾಯ್ತಿ ಕಟ್ಟಡ ಶಿಥಿಲಗೊಂಡಿದೆ   

ಅಳ್ನಾವರ: ಧಾರವಾಡ - ಅಳ್ನಾವರ ಮಾರ್ಗ ಮಧ್ಯ ಸಿದ್ದಾರೂಢ ಮಠದ ಸಾಮಿಪ್ಯದಲ್ಲಿ ಮೆಳೈಸಿದ ಮಲೆನಾಡಿನ ಸೆರಗಿನ ಸುಂದರ, ಸರ್ವ ಜನಾಂಗದ ಶಾಂತಿಯ ತೋಟ ಅರವಟಗಿ ಗ್ರಾಮಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇಲ್ಲಿ ಎರಡು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆದರೂ ಸುಧಾರಣೆ ಮರಿಚಿಕ್ಕೆಯಾಗಿದೆ.

ಅರವಟಗಿ, ಕೋಗಿಲಗೇರಿ, ಕುಂಬಾರಕೊಪ್ಪ , ಅಂಬೊಳ್ಳಿ ಹಾಗೂ ಮೂರು ಗೌಳಿ ದಡ್ಡಿ ವ್ಯಾಪ್ತಿಯಲ್ಲಿ ಚರಂಡಿಗಳು ಇಲ್ಲ. ಎಲ್ಲ ಗ್ರಾಮಗಳ ಗಡಿ ಭಾಗ ಗುರುತಿಸದೇ ಜನರಿಗೆ ತೊಂದರೆಯಾಗಿದೆ. ಭೂಮಾಪನ ಇಲಾಖೆ ಶೀಘ್ರ ಗಡಿ ಗುರುತಿಸಲಿ ಎಂಬ ಬೇಡಿಕೆಗೆ ಮನ್ನಣೆ ದೊರೆತಿಲ್ಲ.

ಹೊಸ ತಾಲ್ಲೂಕು ಕೇಂದ್ರವಾಗಿದ್ದು, ಕಂಪ್ಯೂಟರ್ ಆಧಾರಿತ ಇ–ಸ್ವತ್ತು ದಾಖಲೆಗಳು ದೊರೆಯುತ್ತಿಲ್ಲ ಎಂಬ ಕೂಗು ಬಲವಾಗಿ ಕೇಳಿ ಬಂದಿದೆ. ದಾಖಲೆ ಇಲ್ಲದೆ ಬ್ಯಾಂಕ್ ಸಾಲ ಪಡೆಯಲು ಆಗುತ್ತಿಲ್ಲ. ಆರ್ಥಿಕ ಕ್ಷೇತ್ರ ಹಿನ್ನಡೆ ಆಗಿದೆ ಎಂಬ ಕೂಗು ಇದೆ.

ADVERTISEMENT

ಆಸ್ತಿಗಳ ಗಡಿ ಗುರುತಿಸುವಿಕೆಯನ್ನು ವೈಮಾನಿಕ ಸಮೀಕ್ಷೆ ಕಾರ್ಯ ಅರ್ಧಕ್ಕೆ ನಿಂತಿದೆ. ನಾಲ್ಕು ದಶಕಗಳ ಹಿಂದೆ ಕಟ್ಟಿದ ಗ್ರಾಮ ಪಂಚಾಯ್ತಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಸ್ಥಿತಿಯಲ್ಲಿದೆ ಎಂಬುದು ಇಲ್ಲಿನ ಸ್ಥಿತಿಗತಿ.

‘ಹೈನುಗಾರಿಕೆ ನಂಬಿ ಹಲವು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ಮಡಕಿಕೊಪ್ಪ, ಸಿಂಗನಕೊಪ್ಪ, ಹಾಳ ಸಿದ್ದಾಪೂರ ಹಾಗೂ ಅಂಬೊಳ್ಳಿ ಗೌಳಿ ದಡ್ಡಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಂಬೊಳ್ಳಿ ಸಮೀಪದ ಗೌಳಿ ದಡ್ಡಿಗೆ ಹೋಗಲು ಕೆಸರುಮಯ ರಸ್ತೆಯಲ್ಲಿ ಸಾಗಬೇಕು. ಗ್ರಾಮದ ಮಕ್ಕಳಿಗೆ ಅಂಗನವಾಡಿ ಇಲ್ಲ. ಬೀದಿ ದೀಪದ ಸಮರ್ಪಕ ವ್ಯವಸ್ಥೆ ಇಲ್ಲ’ ಎಂದು ಗ್ರಾಮದ ಸಿದ್ಧು ಯಮಕರ ನ್ಯೂನತೆಗಳ ಪಟ್ಟಿಯನ್ನು ತೆರೆದಿಟ್ಟರು.

‘ಮಡಕಿಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದೆ ಕಂಬಾರಗಣವಿ ಮೂಲಕ 7 ಕಿ.ಮೀ. ಹೆಚ್ಚುವರಿ ಕ್ರಮಿಸಿ ಊರಿಗೆ ಸೇರಬೇಕಾಗಿದೆ. ಇಲ್ಲಿನ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಇದಕ್ಕೆ ಟಾರು ಹಾಕಬೇಕು’ ಎಂದು ಗ್ರಾಮಸ್ಥ ಶಾಂತಾರಾಮ ಆಗ್ರಹಿಸಿದರು.

ಈ ಭಾಗದ ರೈತರ ಜೀವ ನಾಡಿಯಾದ ಕೆರೆಗಳ ದುರಸ್ತಿ ಕಾರ್ಯ ಆಗಬೇಕಿದೆ. ಕೋಗಲಿಗೇರಿ, ಕುಂಬಾರಕೊಪ್ಪ ಹಾಗೂ ಅಂಬೊಳ್ಳಿ ಕೆರೆ ದುರಸ್ತಿ ಕಾರ್ಯ ತುರ್ತಾಗಿ ಆಗಬೇಕಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೊಳಚೆ ಉಂಟಾಗಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

‘ಜಿಲ್ಲಾಧಿಕಾರಿಯ ಪ್ರಥಮ ಗ್ರಾಮ ವಾಸ್ತವ್ಯ ಇಲ್ಲಿನ ಕೋಗಿಲಗೇರಿ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಆಗ ಅಂಬೇಡ್ಕರ್ ಭವನಕ್ಕೆ ₹20ಲಕ್ಷ ಹಾಗೂ ಪರಿಶಿಷ್ಟ ಜಾತಿ ಕಾಲೊನಿಯ ಚರಡಿ ನಿರ್ಮಾಣಕ್ಕೆ ₹25ಲಕ್ಷ ನೀಡುವ ಭರವಸೆ ನೀಡಲಾಗಿದೆ. ಆದರೆ ಅವು ಯಾವುವೂ ಇಲ್ಲಿ ಈವರೆಗೂ ಈಡೇರಿಲ್ಲ’ ಎಂದು ಗ್ರಾಮಸ್ಥ ಮಂಜುನಾಥ ಕೊಳೆನ್ನವರ ಹೇಳಿದರು.

ಗ್ರಾಮದ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಪಿಡಿಒ ಅಪ್ಪಯ್ಯ ಬೀಡಿಮಠ, ‘ಗ್ರಾಮ ಪಂಚಾಯ್ತಿ ಹೊಸ ಕಟ್ಟಡದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ನರೇಗಾ ಯೋಜನೆಯಡಿ ಕೆರೆಗಳ ದುರಸ್ತಿಗಾಗಿ ಅನುಧಾನ ಮೀಸಲಿಡಲಾಗಿದೆ. ಗೌಳಿಗರು ವಾಸವಿರುವ ಮೂರುಸ್ಥಳಗಳು ಅರಣ್ಯ ಪ್ರದೇಶದಲ್ಲಿವೆ. ಇದು ಅರಣ್ಯ ಹಕ್ಕು ಸಮಿತಿಗೆ ಬರುತ್ತದೆ. ಈ ಕುರಿತು 7 ಅರ್ಜಿಗಳನ್ನು ಉಪ ವಿಬಾಗಾಧಿಕಾರಿಗಳಿಗೆ ಸಲ್ಲಿಸಿದ್ದು. ಕಡಿತ ವಿಲೇವಾರಿ ಬಾಕಿ ಇದೆ . ಮಡಕಿಕೊಪ್ಪ ರಸ್ತೆಗೆಶಾಸಕರ ಅನುಧಾನದಡಿ ₹5ಲಕ್ಷ ಹಾಗೂ ಗ್ರಾಮ ಪಂಚಾಯ್ತಿ ಅನುದಾನ ₹1.30ಲಕ್ಷ ಮಂಜೂರಾಗಿದೆ. ಪ್ರತಿ ಮನೆಗೆ ನೀರು ನೀಡುವ ಯೋಜನೆ ಮುಕ್ತಾಯ ಹಂತದಲ್ಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.