ADVERTISEMENT

ಸಿ.ಎಗಳ ಕೈಯಲ್ಲಿ ದೇಶದ ಅಭಿವೃದ್ಧಿ: ಜಗದೀಶ್‌ ಶೆಟ್ಟರ್‌

ಎಸ್‌ಐಆರ್‌ಸಿ ಹುಬ್ಬಳ್ಳಿ ಶಾಖೆಯ 33ನೇ ವಾರ್ಷಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:45 IST
Last Updated 14 ಡಿಸೆಂಬರ್ 2019, 19:45 IST
ಭಾರತ ಲೆಕ್ಕ ಪರಿಶೋಧಕರ ಸಂಘ ಹುಬ್ಬಳ್ಳಿ ಶಾಖೆ ಶನಿವಾರ ಹಮ್ಮಿಕೊಂಡಿದ್ದ 33ನೇ ವಾರ್ಷಿಕ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿದರು
ಭಾರತ ಲೆಕ್ಕ ಪರಿಶೋಧಕರ ಸಂಘ ಹುಬ್ಬಳ್ಳಿ ಶಾಖೆ ಶನಿವಾರ ಹಮ್ಮಿಕೊಂಡಿದ್ದ 33ನೇ ವಾರ್ಷಿಕ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿದರು   

ಹುಬ್ಬಳ್ಳಿ: ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿಗೆ ಬಂದ ಮೇಲೆ ಸಿ.ಎ. (ಲೆಕ್ಕ ಪರಿಶೋಧಕರು) ವೃತ್ತಿಯ ಬೇಡಿಕೆ ಹೆಚ್ಚಿದೆ. ಈ ವೃತ್ತಿಯಲ್ಲಿ ಇರುವವರು ಸ್ವಂತ ಅಭಿವೃದ್ಧಿಯನ್ನಷ್ಟೇ ನೋಡಿಕೊಳ್ಳದೆ ದೇಶದ ಪ್ರಗತಿಗೂ ನೆರವಾಗಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಭಾರತ ಲೆಕ್ಕ ಪರಿಶೋಧಕರ ಸಂಘ (ಎಸ್‌ಐಆರ್‌ಸಿ) ಹುಬ್ಬಳ್ಳಿ ಶಾಖೆ ಹಮ್ಮಿಕೊಂಡಿದ್ದ 33ನೇ ವಾರ್ಷಿಕ ಸಮ್ಮೇಳನದ ಎರಡನೇ ದಿನವಾದ ಶನಿವಾರ ಮಾತನಾಡಿದ ಅವರು ‘ದೇಶದ ಅಭಿವೃದ್ಧಿ ಸಿ.ಎ.ಗಳ ಕೈಯಲ್ಲಿದೆ. ನೀವೆಲ್ಲರೂ ಮಾಡುವ ಕಾರ್ಯ ದೇಶದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಕೈಗಾರಿಕೆ, ಉದ್ಯಮ ಹೀಗೆ ಪ್ರತಿ ಕ್ಷೇತ್ರಗಳಲ್ಲಿ ತೊಡಗಿರುವವರು ಲೆಕ್ಕಪತ್ರದ ವ್ಯವಹಾರಕ್ಕೆ ಸಿ.ಎ.ಗಳನ್ನೇ ಅವಲಂಬಿಸುತ್ತಿದ್ದಾರೆ’ ಎಂದರು.

‘ಸಿ.ಎ. ಗಳು ತೆರಿಗೆ ಕಟ್ಟುವ ವಿಧಾನವನ್ನು ಸುಲಭವಾಗಿಸಿದ್ದಾರೆ. ಬಹಳಷ್ಟು ಜನ ತೆರಿಗೆ ಉಳಿಸುವುದು ಹೇಗೆ ಎನ್ನುವ ಹಾದಿಗಳನ್ನು ಹುಡುಕುತ್ತಾರೆ. ಸಿ.ಎ.ಗಳು ಅದಕ್ಕೆ ಅವಕಾಶ ನೀಡದೆ ಸರಿಯಾಗಿ ತೆರಿಗೆ ತುಂಬಿ ದೇಶದ ಅಭಿವೃದ್ಧಿಗೆ ನೆರವಾಗುವಂತೆ ತೆರಿಗೆದಾರರಿಗೆ ಸಲಹೆ ನೀಡಬೇಕು. ತೆರಿಗೆ ತುಂಬುವ ಬಗ್ಗೆ ಜನರಲ್ಲಿ ಶಿಸ್ತು ತರಲು ಶ್ರಮಿಸಬೇಕು’ ಎಂದರು.

ADVERTISEMENT

‘ಲೆಕ್ಕ ಪರಿಶೋಧನೆ ಮತ್ತು ತೆರಿಗೆ ತುಂಬಲು ಅನುಕೂಲವಾಗಲು ಸಾಕಷ್ಟು ತಂತ್ರಜ್ಞಾನಗಳು ಬಂದಿವೆ. ಅವುಗಳ ಬಗ್ಗೆಯೂ ನಿರಂತರ ಅಧ್ಯಯನ ಮಾಡಿ ಬದಲಾಗುತ್ತಿರುವ ಕಾಲಮಾನಕ್ಕೆ ಹೊಂದಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್‌ ಮಂಡನೆಗೂ ಮೊದಲು ನಿಮ್ಮ ವಿಚಾರಗಳನ್ನು ಜನಪ್ರತಿನಿಧಿಗಳ ಜೊತೆ ಹಂಚಿಕೊಂಡರೆ ಅನುಕೂಲವಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳನ್ನು ಆರಂಭಿಸುವ ಗುರಿಯಿದ್ದು, ಇದಕ್ಕೂ ನಿಮ್ಮ ಸಹಕಾರ ಅಗತ್ಯವಿದೆ’ ಎಂದರು.

ಸಂಘದ ಹುಬ್ಬಳ್ಳಿ ಶಾಖೆಯ ಚೇರ್ಮನ್‌ ಕೆ.ವಿ. ದೇಶಪಾಂಡೆ, ಕಾರ್ಯದರ್ಶಿ ಎಚ್‌.ಎನ್‌. ಅಡಿನವರ, ಸಮಾವೇಶದ ಸಮಿತಿಯ ಚೇರ್ಮನ್‌ ಹಿತೇಶಕುಮಾರ ಮೋದಿ,‌ ಸುಭಾಷ ಪಾಟೀಲ, ಸಂಚಾಲಕರಾದ ಸಂಜೀವಕುಮಾರ ಹಾದಿಮನಿ, ಮನೋಜ ದೇಸಾಯಿ ಮತ್ತು ವೀಣಾ ಮುದಿ ಗೌಡರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.