ADVERTISEMENT

Dharwad Krishi Mela | ಕೃಷಿಮೇಳದ ಜನಜಾತ್ರೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 1:25 IST
Last Updated 23 ಸೆಪ್ಟೆಂಬರ್ 2024, 1:25 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ ವೀಕ್ಷಿಸಲು ಎರಡನೇ ದಿನವಾದ ಭಾನುವಾರ ಕಂಡುಬಂದ ಜನದಟ್ಟಣೆ  –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ ವೀಕ್ಷಿಸಲು ಎರಡನೇ ದಿನವಾದ ಭಾನುವಾರ ಕಂಡುಬಂದ ಜನದಟ್ಟಣೆ  –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ಸು, ಕಾರು, ಟಾಂಗಾ, ಟೆಂಪೊಗಳು, ಸಿಕ್ಕ ಕಿರಿದಾದ ಜಾಗದಲ್ಲಿಯೇ ತೂರಿಕೊಂಡು ಹೋಗುವ ದ್ವಿಚಕ್ರ ವಾಹನಗಳು, ಅರ್ಧ ದಾರಿಯಲ್ಲೇ ಬಸ್ಸಿನಿಂದಿಳಿದು ನಡಿಗೆ ಶುರುಹಚ್ಚಿದ ಯುವಕರು, ಸಂಚಾರ ಪೊಲೀಸರ ಸೀಟಿಯ ಸದ್ದು, ವಾಹನಗಳ ಭರಾಟೆಗೆ ಮುಖಕ್ಕೆ ಬಡಿಯುವ  ದೂಳು...

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಎರಡನೇ ದಿನವಾದ ಭಾನುವಾರ ಜನಸಾಗರವೇ ಹರಿದು ಬಂದ ಪರಿಣಾಮ ಅಂದಾಜು ಎರಡು ಕಿ.ಮೀ ವರೆಗೆ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾದಾಗ ಕಂಡುಬಂದ ಚಿತ್ರಣವಿದು.

ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗ ಭರ್ತಿಯಾಗಿ, ಅಂದಾಜು ಎರಡು ಕಿ.ಮೀ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಅಷ್ಟು ದೂರದಿಂದಲೇ ಜನ ನಡೆದುಕೊಂಡು ಕೃಷಿ ಮೇಳಕ್ಕೆ ಬರುತ್ತಿದ್ದುದು ಕಂಡು ಬಂತು.

ADVERTISEMENT

ರಜಾ ದಿನವಾದ್ದರಿಂದ ಬೆಳಿಗ್ಗೆಯಿಂದ ಸಂಜೆವರೆಗೂ ಜನದಟ್ಟಣೆ ಇತ್ತು. ಕೃಷಿಮೇಳವನ್ನು ಹಬ್ಬದಂತೆ ಸಂಭ್ರಮಿಸುವ ಧಾರವಾಡ ಹಾಗೂ ಆಸುಪಾಸಿನ ಜಿಲ್ಲೆಯ ಜನರು ಕುಟುಂಬ ಸಮೇತರಾಗಿ ಹರಟೆ ಹೊಡೆಯುತ್ತ ಸಾಗಿದರು. ಮಳಿಗೆಗಳು ತುಂಬಿ ತುಳುಕುತ್ತಿದ್ದವು. ಕಾಲಿಡಲಾಗದೆ ಕೆಲವರು ಮುಂದಿನ ಮಳಿಗೆಗಳತ್ತ ಹೆಜ್ಜೆ ಹಾಕುತ್ತಿದ್ದರು.

ಸಿಂಗರಿಸಿದ ಕೋಣಗಳನ್ನು ವೀಕ್ಷಿಸಲು, ಅವುಗಳ ಜತೆ ಫೋಟೊ ಕ್ಲಿಕ್ಕಿಸಲು ಜನರು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾಟಿ ಕೋಳಿ, ಕಾವೇರಿ, ಸಹ್ಯಾದ್ರಿ ತಳಿಯ ಕೋಳಿ ಮರಿಗಳನ್ನು ಕೆಲವರು ಖರೀದಿಸಿದರು.

ಹೈಟೆಕ್‌ ಮಳಿಗೆ, ಕೃಷಿ ಪರಿಕರಗಳ ಮಳಿಗೆಗಳಲ್ಲಿ ರೈತರು ತಮ್ಮ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದರು. ಸಾಧಕ ರೈತರ ಮಳಿಗೆಗಳ ಮುಂದೆಯೂ ರೈತರು ಸೇರಿ ಮಾಹಿತಿಗಳ ಫಲಕವನ್ನು ಕುತೂಹಲದಿಂದ ಗಮನಿಸಿದರು.

ತಂಪೆರೆದ ತುಂತುರು ಮಳೆ

ಕೃಷಿ ಮೇಳದಲ್ಲಿ ಮಧ್ಯಾಹ್ನದ ಹೊತ್ತಿಗೆ ಸುರಿದ ತುಂತುರು ಮಳೆ ತಂಪೆರೆಯಿತು. ರೈತರು ಮಳೆಯಲ್ಲಿಯೇ ಹರ್ಷದಿಂದ ಹೆಜ್ಜೆ ಹಾಕಿದರೆ ಮಹಿಳೆಯರು ಯುವಕರು ಹಾಗೂ ಮಕ್ಕಳು ಓಡುತ್ತ ಮಳಿಗೆಗಳನ್ನು ಸೇರಿದರು.

ಕೃಷಿ ಮೇಳದಲ್ಲಿ ಯಂತ್ರಗಳ ಮಾಹಿತಿ ಪಡೆದ ರೈತರು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.