ಧಾರವಾಡ: ಬಾಹ್ಯಾಕಾಶದಲ್ಲಿ ಗಗನಯಾನಿಗಳ ಮೂತ್ರಕೋಶದಲ್ಲಿ ಕಲ್ಲು (ಕಿಡ್ನಿ ಸ್ಟೋನ್) ರೂಪುಗೊಳ್ಳುವುದನ್ನು ತಿಳಿಯಲು ಹಣ್ಣಿನ ನೊಣ (ಫ್ರೂಟ್ ಫ್ಲೈ) ಬಳಸಲು ಸಿದ್ಧತೆ ನಡೆದಿದೆ. ಕೇರಳದ ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಎಸ್‌ಟಿ) ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಕಾರ್ಯ ಪ್ರಗತಿಯಲ್ಲಿದೆ.
ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಹೊಸಮನಿ ಮತ್ತು ಕೇರಳದ ಐಐಎಸ್‌ಟಿ ರಸಾಯನ ವಿಜ್ಞಾನ ವಿಭಾಗದ ಪ್ರೊ.ಶ್ರೀಜಾಲಕ್ಷ್ಮಿ ಅವರು ಪ್ರಯೋಗ ರೂಪಿಸಿದ್ದಾರೆ. ಯೋಜನೆ ವಿವರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಕಳುಹಿಸಿದ್ದಾರೆ.
‘2025ರಲ್ಲಿ ಬಾಹ್ಯಾಕಾಶಕ್ಕೆ ಗಗನನೌಕೆ ಕಳುಹಿಸಲು ಇಸ್ರೊ ಉದ್ದೇಶಿಸಿದೆ. ಇದರ ಅವಧಿ ಏಳು ದಿನ. ನೌಕೆಯು 400 ಕಿ.ಮೀ ಎತ್ತರ ಕ್ರಮಿಸಲಿದೆ. ಹಣ್ಣಿನ ನೊಣಗಳಿರುವ ಕಿರು ಪ್ರನಾಳಗಳನ್ನು ಗಗನನೌಕೆಯಲ್ಲಿ ಕಳುಹಿಸಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ರವಿಕುಮಾರ ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಗನಯಾನಿಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಮೂಳೆಗಳಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿ ಸ್ಟೋನ್ ರೂಪುಗೊಳ್ಳುತ್ತವೆ. ಹಣ್ಣಿನ ನೊಣದ (Drosophila melanogaster) ವಂಶವಾಹಿಗಳು ಮಾನವ ವಂಶವಾಹಿಗಳನ್ನು ಶೇ 77ರಷ್ಟು ಹೋಲುತ್ತವೆ. ಹಣ್ಣಿನ ನೊಣದ ‘ಮಾಲ್ಪಿಜಿಯನ್ ಟ್ಯುಬ್ಯುಲ್’ ಅಂಗವು ಮಾನವ ಕಿಡ್ನಿ ಮಾದರಿಯಲ್ಲೇ ಇದೆ. ಹೀಗಾಗಿ ಪ್ರಯೋಗಕ್ಕೆ ಈ ನೊಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರನಾಳದಲ್ಲಿ ಸೋಡಿಯಂ ಆಕ್ಸಿಲೇಟ್ (NaOx), ಬೆಲ್ಲ, ಗೋಧಿ ಹೂರಣ ಅಹಾರ ಇಟ್ಟಿರುತ್ತೇವೆ. ಒಂದು ಪ್ರನಾಳದಲ್ಲಿ 15 ಹಣ್ಣಿನ ನೊಣಗಳನ್ನು (ಗಂಡು ಮತ್ತು ಹೆಣ್ಣು) ಬಿಟ್ಟಿರುತ್ತೇವೆ. ಗಗನನೌಕೆಯಲ್ಲಿ ಎರಡು ಪೆಟ್ಟಿಗೆಗಳನ್ನು (ಸುಮಾರು 500 ನೊಣಗಳು) ಕಳಹಿಸಲು ನಿರ್ಧರಿಸಿದ್ದೇವೆ’ ಎಂದು ವಿವರಿಸಿದರು.
‘ನೌಕೆಯು ಏಳು ದಿನ ಗಗನಯಾನ ಮುಗಿಸಿ ಸಮುದ್ರ ಪ್ರದೇಶದಲ್ಲಿ ಇಳಿದ ಬಳಿಕ ಪೆಟ್ಟಿಗೆಗಳನ್ನು ತಂದು ಅದರಲ್ಲಿನ ನೊಣಗಳನ್ನು ಅಧ್ಯಯನ ಮಾಡಲಾಗುವುದು. ಭೂಮಿಯಲ್ಲಿ ಇದ್ದಾಗ ಕಿಡ್ನಿಯಲ್ಲಿ ರೂಪುಗೊಂಡ ಕಲ್ಲಿಗೂ ಗಗನದಲ್ಲಿದ್ದಾಗ ರೂಪುಗೊಂಡ ಕಲ್ಲಿಗೂ ವ್ಯತ್ಯಾಸಗಳಿವೆಯೇ ಎಂಬುದನ್ನು ಅಧ್ಯಯನ ಮಾಡುತ್ತೇವೆ. ಅಧ್ಯಯನದಿಂದ ಗಗನಯಾನಿಗಳ ಕಿಡ್ನಿ ಸ್ಟೋನ್ ಸಮಸ್ಯೆಗೆ ಔಷಧ ಸಂಶೋಧನೆಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.