ADVERTISEMENT

ಕುಂದಗೋಳ | ಉದ್ಘಾಟನೆಯಾಗದ ಅಂಗನವಾಡಿ ಕೇಂದ್ರ

ವೇದಾಂತ ಫೌಂಡೇಷನ್‌ನ ಸಿಎಸ್ಆರ್ ನಿಧಿಯಡಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 5:45 IST
Last Updated 28 ನವೆಂಬರ್ 2023, 5:45 IST
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ಕಟ್ಟಡ
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ಕಟ್ಟಡ   

ಕುಂದಗೋಳ: ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ವೇದಾಂತ ಫೌಂಡೇಷನ್‌ನ ಸಿಎಸ್ಆರ್ ನಿಧಿಯಡಿ ಅಂಗನವಾಡಿ ಕೇಂದ್ರ ‘ನಂಧಘರ್’ ಅನ್ನು ನಿರ್ವಿಸಿ ಒಂದು ವರ್ಷ ಕಳೆದರೂ ಈವರೆಗೂ ಉದ್ಘಾಟಿಸಿಲ್ಲ.

ಗ್ರಾಮದಲ್ಲಿ ಸದ್ಯ ಅಂಗನವಾಡಿ ಕೇಂದ್ರದ ಕೇಂದ್ರದ ಮೇಲ್ಚಾವಣಿ ಬಿರುಕು ಬಿಟ್ಟಿದ್ದು, ಕಟ್ಟಡ ಶಿಥಿಲವಾಗಿದೆ. ಹೊಸ  ಕಟ್ಟಡ ಉದ್ಘಾಟನೆಯಾಗದ ಕಾರಣ ಶಿಥಿಲಗೊಂಡ ಹಳೆಯ ಕಟ್ಟಡದಲ್ಲೇ ಮಕ್ಕಳು ಕುಳಿತುಕೊಳ್ಳಬೇಕಿದೆ. 

ಹೊಸ ಅಂಗನವಾಡಿ ಕೇಂದ್ರದ ಕಟ್ಟಡದ ಸುತ್ತಮುತ್ತ ಜನ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಗುಟ್ಕಾ, ಸಿಗರೇಟ್, ಮದ್ಯದ ಪ್ಯಾಕೆಟ್ ಅಂಗಳದಲ್ಲಿ ಬಿದ್ದಿವೆ. ಕೇಂದ್ರದ ಎದುರಿನ ಕಟ್ಟೆ ಬಳಿ ಜಾನುವಾರುಗಳನ್ನು ಕಟ್ಟಲಾಗುತ್ತಿದೆ ಎಂದು  ಗ್ರಾಮದ ಬಸವರಾಜ ಯೋಗಪ್ಪನವರ ಹೇಳಿದರು.

ADVERTISEMENT

ಕಟ್ಟಡದ ಗೋಡೆ ಮೇಲೆ ಗೀಚಿ ಅಂದ ಹಾಳು ಮಾಡಲಾಗಿದೆ. ಕೇಂದ್ರದ ಒಳಗೆ ದೂಳು ತುಂಬಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಿಸಿದ್ದರೂ ಸೌಲಭ್ಯ ಮಕ್ಕಳಿಗೆ ಸಿಗುತ್ತಿಲ್ಲ.

ನೂತನ ಕೇಂದ್ರದಲ್ಲಿ ಟಿ.ವಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಅಡುಗೆ ಕೋಣೆ, ಆಧುನಿಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಗೋಡೆ ಮೇಲೆ ಬಿಡಿಸಿರುವ ಆಕರ್ಷಕ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತಿವೆ.

ಹಳೆಯ ಅಂಗನವಾಡಿ ಕೇಂದ್ರದ ಕಟ್ಟಡ ಸುರಕ್ಷಿತವಾಗಿಲ್ಲ. ನೆಲಕ್ಕೆ ಹಾಕಿದ್ದ ಕಲ್ಲುಗಳು ಕುಸಿಯುತ್ತಿವೆ. ಮಕ್ಕಳು ಭಯದಲ್ಲಿ ಪಾಠ ಕೇಳುವಂತಾಗಿದೆ. ಕೂಡಲೇ ಕೇಂದ್ರದ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಗುಡೇನಕಟ್ಟಿ ಗ್ರಾಮದಲ್ಲಿನ ಹಳೆಯ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಬಿರುಕು ಬಿಟ್ಟಿರುವುದು
ಅಂಗನವಾಡಿ ನ 27ರ ಮೇಲು ಛಾವಣಿ ಉದುರುತ್ತಿದೆ
ಸಮಸ್ಯೆ ಗಮನಕ್ಕೆ ಬಂದಿದ್ದು ಶೀಘ್ರ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು –
ಡಾ.ಕಮಲಾ ಬೈಲೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಂದಗೋಳ
ಭಯದಲ್ಲಿ ಮಕ್ಕಳನ್ನು ಅಂಗನವಾಡಿಗೆ ಕಳಿಸಬೇಕಾಗಿದೆ.ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೊಸ ಕೇಂದ್ರ ‘ನಂದಘರ್‌’ ಅನ್ನು ಶೀಘ್ರ ಉದ್ಘಾಟಿಸಬೇಕು.
     – ಸುಧಾ ಕುಸುಗಲ್ ಪಾಲಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.