ಧಾರವಾಡ: ‘ತಾಲ್ಲೂಕಿನ ಮುಗದದ ಕೃಷಿ ಸಂಶೋಧನಾ ಕೇಂದ್ರವು ಭತ್ತದ ತಳಿಗಳ ಸಂರಕ್ಷಣೆಗೆ ಶ್ರಮಿಸಿದೆ. ರೈತರಿಗೆ ಅನುಕೂಲ ಕಲ್ಪಿಸಿದೆ’ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿ ಹೇಳಿದರು.
ಕೇಂದ್ರದಲ್ಲಿ ಶನಿವಾರ ನಡೆದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಕಲಘಟಗಿ ಹಾಗೂ ಉತ್ತರ ಕನ್ನಡದ ಭಾಗಗಳು ಭತ್ತ ಕೃಷಿಗೆ ಹೆಸರಾಗಿದ್ದವು. ಈಗ ಧಾರವಾಡ ಭಾಗದಲ್ಲೂ ಭತ್ತ ಬೆಳೆಯಲಾಗುತ್ತಿದೆ’ ಎಂದರು.
ಹೈದರಾಬಾದ್‌ನ ಭತ್ತ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಆರ್.ಎಂ.ಸುಂದರಂ ಮಾತನಾಡಿ, ‘ಇಲ್ಲಿನ ಅಭಿವೃದ್ಧಿಪಡಿಸಿದ ‘ಅಭಿಲಾಷಾ’, ‘ಮುಗದ ಸಿರಿ’, ‘ಮುಗದ ಸುಗಂಧಿ’ ಮುಂತಾದ ಭತ್ತದ ತಳಿಗಳು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿವೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಪಾಟೀಲ ಮಾತನಾಡಿ, ‘ಮಣ್ಣಿನ ಸಂರಕ್ಷಣೆ, ಸಮಗ್ರ ಕೃಷಿಯತ್ತ ರೈತರು ಗಮನಹರಿಸಬೇಕು. ಕೇಂದ್ರದ ಬೇಸಾಯಶಾಸ್ತ್ರ ಹಾಗೂ ಸಸ್ಯ ಸಂರಕ್ಷಣೆ ವಿಭಾಗಕ್ಕೆ ವಿಜ್ಞಾನಿಗಳ ಹುದ್ದೆ ಮಂಜೂರು ಮಾಡಬೇಕು’ ಎಂದು ಕೋರಿದರು.
ಪ್ರೊ.ಜಿ.ಎನ್.ಹನುಮರಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಗದ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಕಸಮಳಗಿ, ಸಂಶೋಧನಾ ನಿರ್ದೇಶಕ ಬಿ.ಡಿ.ಬಿರಾದಾರ, ಕೇಂದ್ರದ ಮುಖ್ಯಸ್ಥ ಜೆ.ಆರ್.ದಿವಾಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.