ಧಾರವಾಡ: ಅಮೆರಿಕದಲ್ಲಿ ನೆಲೆಸಿರುವ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಉಮಾ ಸುರಕೋಡ ಅವರು ‘ಮಿಸೆಸ್ ಸೌತ್ ಏಷ್ಯಾ ವರ್ಲ್ಡ್–2024’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಮೆರಿಕದ ‘ಮೈ ಡ್ರೀಮ್’ ಟಿವಿ ವತಿಯಿಂದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪೂಜಾ ಬಾತ್ರಾ ಅವರು ಉಮಾ ಅವರಿಗೆ ಕಿರೀಟ ತೊಡಿಸಿ ಅಭಿನಂದಿಸಿದರು.
ಉಮಾ ಅವರು ಅಣ್ಣಿಗೇರಿಯ ಮಲ್ಲಿಕಾರ್ಜುನ ಸುರಕೋಡ ಮತ್ತು ವಿದ್ಯಾ ಸುರಕೋಡ ದಂಪತಿಯ ಪುತ್ರಿ. ಹುಬ್ಬಳ್ಳಿಯ ಕಾರ್ತಿಕ್ ವಾಲಿ ಅವರನ್ನು ವಿವಾಹವಾಗಿದ್ದಾರೆ. ಪತಿ, ಪತ್ನಿ ಇಬ್ಬರೂ ಅಮೆರಿಕದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು.
‘ಪುತ್ರಿ ಉಮಾ ಎಸ್‌ಎಸ್‌ಎಲ್‌ಸಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಳು. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ (ಕಂಪ್ಯೂಟರ್ ಸೈನ್ಸ್ ) ಓದಿ, ನಂತರ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ (ಎಂ.ಎಸ್) ಪಡೆದಿದ್ದಾಳೆ. 2017ರಿಂದ ಪುತ್ರಿ ಮತ್ತು ಅಳಿಯ ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ಧಾರೆ’ ಎಂದು ಉಮಾ ಅವರ ತಂದೆ ಮಲ್ಲಿಕಾರ್ಜುನ ಸುರಕೋಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪುತ್ರಿ ಉಮಾಗೆ ಕಳೆದ ವರ್ಷ ಮಿಸೆಸ್ ಭಾರತ್ ಕ್ಯಾಲಿಫೋರ್ನಿಯಾ ಪುರಸ್ಕಾರ ಲಭಿಸಿತ್ತು. ಶಾಲಾ ದಿನಗಳಿಂದಲೂ ಓದು, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದಿದ್ದಳು. ನಾಯಕತ್ವ ಗುಣ ಅವಳಲ್ಲಿದೆ. ಈ ವರ್ಷ ಈ ಮಿಸೆಸ್ ಸೌತ್ ಏಷ್ಯಾ ವರ್ಲ್ಡ್ ಪ್ರಶಸ್ತಿ ಸಂದಿದೆ’ ಎಂದು ಖುಷಿ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.