ಧಾರವಾಡ: ನಗರದ ಕೇಂದ್ರ ಕಾರಾಗೃಹದಲ್ಲಿ ಭದ್ರತೆ, ನಿಗಾ ನಿಟ್ಟಿನಲ್ಲಿ ಸುತ್ತ ನಾಲ್ಕು ವೀಕ್ಷಣಾ ಗೋಪುರ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಶೇ 75ರಷ್ಟು ಮುಗಿದಿದೆ.
ಜೈಲು ಭಾಗದಲ್ಲಿ ಕಣ್ಗಾವಲಿಗೆ ಒಳಭಾಗದಲ್ಲಿ 55 ಹಾಗೂ ಸುತ್ತ(ಹೊರ ವಲಯ) 10 ಒಟ್ಟು 65 ಸಿ.ಸಿ ಟಿವಿ ಕ್ಯಾಮೆರಾಗಳಿವೆ. ನಿಗಾ ಇನ್ನಷ್ಟು ಬಿಗಿಗೊಳಿಸಲು ನಾಲ್ಕೂ ದಿಕ್ಕುಗಳಲ್ಲಿ ವೀಕ್ಷಣಾ ಗೋಪುರ ಸಜ್ಜುಗೊಳಿಸಲಾಗುತ್ತಿದೆ.
‘ಒಂದು ಕೋಟಿ ವೆಚ್ಚದಲ್ಲಿ ಗೋಪುರಗಳು ನಿರ್ಮಾಣವಾಗಲಿವೆ. ಗೋಪುರದ ಎತ್ತರ 30 ಅಡಿ. ಕಾಂಪೌಂಡ್ ಸುತ್ತಲಿನ ಚಲನವಲನಗಳ ಮೇಲೆ ನಿಗಾ ಇಡಲು, ಹೊರಗಿನಿಂದ ಜೈಲು ಭಾಗದೊಳಕ್ಕೆ ಯಾರಾದರೂ ಏನಾದರೂ ಎಸೆದರೆ ಪತ್ತೆ ಮಾಡಲು ಅನುಕೂಲವಾಗಲಿದೆ. ಕಾಮಗಾರಿಯನ್ನು ಇನ್ನು ನಾಲ್ಕು ತಿಂಗಳಲ್ಲಿ ಮುಗಿಸುವುದಾಗಿ ಗುತ್ತಿಗೆದಾರ ತಿಳಿಸಿದ್ಧಾರೆ’ ಎಂದು ಕಾರಾಗೃಹ ಸೂಪರಿಂಟೆಂಡೆಂಟ್ ಪಿ.ಮಹದೇವನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು ಜೈಲು ಸುತ್ತ ಗೋಪುರಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಇಲ್ಲಿಯೂ ಈಗ ನಿರ್ಮಿಸಲಾಗುತ್ತಿದೆ. ಗೋಪುರದಲ್ಲಿ 24X7 ಶಸ್ತ್ರಧಾರಿ ಸಿಬ್ಬಂದಿ ಕಾರ್ಯನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು. ವೀಕ್ಷಣೆಗೆ ಬೈನಾಕ್ಯುಲರ್ ನೀಡಲಾಗುವುದು’ ಎಂದು ತಿಳಿಸಿದರು.
ಜೈಲು ಅವರಣದ ಒಟ್ಟು ವಿಸ್ತೀರ್ಣ 59 ಎಕರೆ, ಈ ಪೈಕಿ 19 ಎಕರೆ ಪ್ರದೇಶದಲ್ಲಿ ಜೈಲು ಕಟ್ಟಡ ಇದೆ. ಕಟ್ಟಡದಲ್ಲಿ 12 ಡಾರ್ಮಿಟರಿ ಹಾಗೂ 18 ಸೆಲ್‌ಗಳು ಇವೆ.
ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಬೆಂಗಳೂರಿನ ಗಿರಿನಗರದ ಧನರಾಜ್ ಅಲಿಯಾಸ್ ರಾಜು (ನಟ ದರ್ಶನ್ ತಂಡದಲ್ಲಿ ಗುರುತಿಸಿಕೊಂಡಿದ್ದವ) ಈ ಜೈಲಿನಲ್ಲಿ ಇದ್ದಾರೆ. ಈತ ಸಹಿತ ಮೂವರನ್ನು ಒಂದು ಸೆಲ್‌ನಲ್ಲಿ ಇರಿಸಲಾಗಿದೆ.
‘ಜೈಲಿನ ಸುತ್ತಲಿನ ಕಾಂಪೌಂಡ್ ಗೋಡೆಯ ಮೇಲೆ ಬೇಲಿ (ಫೆನ್ಸಿಂಗ್) ನಿರ್ಮಾಣ ಮಾಡಬೇಕು. ಆವರಣ ಪ್ರದೇಶಕ್ಕೆ ಯಾರೂ ಜಿಗಿಯದಂತೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ಇಲಾಖೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಕಾಂಪೌಂಡ್ ಮೇಲೆ ಮೂರು ಅಡಿ ಬ್ಲೇಡ್ ಫೆನ್ಸಿಂಗ್ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಹದೇವನಾಯ್ಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.