ADVERTISEMENT

‘ವಾಷ್’ ಮಕ್ಕಳೇ ಭೇಷ್ | ‘ಕೊರೊನಾ‘ಗೆ ಮುನ್ನವೇ ಕೈತೊಳೆಯುವ ಪಾಠ

ಹರ್ಷವರ್ಧನ ಶೀಲವಂತ
Published 29 ಜೂನ್ 2020, 19:30 IST
Last Updated 29 ಜೂನ್ 2020, 19:30 IST
   

‘ಆ ಕಾರ ಅಟೈಕಾಪೋ’ – ಅಂದ್ರೆ ನಿಮಗೆ ಗೊತ್ತೇ?!

ಹೀಗೆ ಕೂಗಿದ್ದು, ಹುಬ್ಬಳ್ಳಿ ಹೊರವಲಯದ ಗೋಕುಲವೆಂಬ ಪುಟ್ಟ ಗ್ರಾಮದ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢ ಶಾಲೆಯ 8, 9 ಹಾಗೂ 10ನೇ ವರ್ಗದ ವಿದ್ಯಾರ್ಥಿಗಳು. ಈ ಮಕ್ಕಳು ತಮ್ಮ ಶಾಲಾ ಸಂಸತ್ತಿನಲ್ಲಿ ನಿರ್ಣಯಿಸಿದಂತೆ, ‘ನೀರು, ನೈರ್ಮಲ್ಯ ಹಾಗೂ ಶುಚಿತ್ವ’ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಪ್ರಭಾತ್‌ಫೇರಿ ನಡೆಸಿದಾಗ ಹೀಗೆ ಘೋಷಣೆ ಕೂಗಿದರು.

ಕೋವಿಡ್ -19 ಲಾಕ್‍ಡೌನ್‍ಗಿಂತ ಕೇವಲ ಎರಡು ದಿನಗಳ ಮುಂಚೆ ಈ ಪ್ರಭಾತ್‌ಫೇರಿ ನಡೆಯಿತು. ವಿದ್ಯಾರ್ಥಿಗಳ ಈ ನಡೆ ಇಡೀ ಗ್ರಾಮದಲ್ಲಿ ಕುತೂಹಲ ಕೆರಳಿಸಿತ್ತು. ಗ್ರಾಮಸ್ಥರದ್ದು ಒಂದೇ ಪ್ರಶ್ನೆ ‘ಏನ್ ಹಂಗಂದ್ರ?!’

ADVERTISEMENT

ಭಿತ್ತಿಬರಹದ ಫಲಕಗಳ ಹಿಂದೆ ಆ ಒಂದೊಂದು ಅಕ್ಷರದ ವಿವರ. ಜಲಜನ್ಯ ಕಾಯಿಲೆಗಳಾದ ಆಮಶಂಕೆ, ಕಾಲರಾ, ರಕ್ತಬೇಧಿ, ಅತಿಸಾರ, ಟೈಫಾಯಿಡ್, ಕಾಮಾಲೆ ಮತ್ತು ಪೋಲಿಯೊ. ಎಲ್ಲ ಮಕ್ಕಳೂ ಸಾಲಾಗಿ ನಿಂತು, ಫಲಕ ತಿರುಗಿಸಿದ ಕೂಡಲೇ ‘ಹೌದಾ?!’ ಎಂಬ ಭಯ ಮಿಶ್ರಿತ ಉದ್ಗಾರ ಗೋಕುಲದ ಜನರಿಂದ.

ಇದು ‘ವಾಷ್‌’ ಪರಿಣಾಮ

ಇದು ಎರಡು ವರ್ಷಗಳಿಂದ ಹುಬ್ಬಳ್ಳಿ–ಧಾರವಾಡ ಜಿಲ್ಲೆಯ 67 ಶಾಲೆಗಳಲ್ಲಿ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್ (ಎಸ್‌ವಿವೈಎಂ) ಸಂಸ್ಥೆ ಅನುಷ್ಠಾನಗೊಳಿಸುತ್ತಿರುವ ‘ವಾಷ್‌’ (ವಾಟರ್, ಸ್ಯಾನಿಟೇಷನ್ ಆಂಡ್ ಹೈಜೀನ್–WASH)ಕಾರ್ಯಕ್ರಮದ ಪರಿಣಾಮ. ಮಕ್ಕಳು ಕಲಿತು, ಸಮುದಾಯಕ್ಕೆ ಕಲಿಸುವ, ಬೊಗಸೆ ನೀರಿನ ಆಟವಿದು. ಇದಲ್ಲಿರುವ ಕೈ ತೊಳೆಯುವ ಆರು ಹಂತಗಳ ಪ್ರಾತ್ಯಕ್ಷಿಕೆ ನೋಡಿ, ಹಿರಿಕಿರಿಯರಿಂದ ‘ವಾಹ್’ ಎಂಬ ಮೆಚ್ಚುಗೆ. ಇದರ ಜತೆಗೆ, ನೀರು–ನೈರ್ಮಲ್ಯ–ಶುಚಿತ್ವ ಕುರಿತು ಬೀದಿನಾಟಕ, ಆಟ, ಸ್ವಚ್ಛತಾ ಶಿಬಿರಗಳ ಮೂಲಕ ಮಕ್ಕಳಿಂದ ಸಮುದಾಯ ಜಾಗೃತಿ. ಪರಿಣಾಮ, ಶಾಲೆಯಲ್ಲಿ ಕಲಿತ ಈ ‘ಬೆಸ್ಟ್ ಪ್ರ್ಯಾಕ್ಟೀಸಸ್‌’ ಸ್ವತಃ ಮನೆಯಲ್ಲೂ ಪಾಲನೆ. ಮಾತ್ರವಲ್ಲ, ಮನೆಯವರೆಲ್ಲ ಪಾಲಿಸುವಂತೆ ಈ ಮಕ್ಕಳಿಂದಲೇ ಒತ್ತಾಯ.

ಇನ್ನೊಂದು ಮಾದರಿ ನೋಡಿ; ಕಲಘಟಗಿ ತಾಲ್ಲೂಕು ಬೀರವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಗಳು, ಶಾಲಾ ಸಂಸತ್‍ನಲ್ಲಿ ನಿರ್ಣಯಿಸಿ, ತಡವಾಗಿ ಶಾಲೆಗೆ ಆಗಮಿಸುವ ತಮ್ಮ ಗೆಳೆಯರಿಂದ ತಾವೇ ದಂಡ ಸಂಗ್ರಹಿಸಿ,ಆ ಹಣದಲ್ಲಿ ‘ಲಿಕ್ವಿಡ್ ಸೋಪ್’ ಮತ್ತು ‘ಸ್ಯಾನಿಟೈಜರ್’‌ಖರೀದಿಸಿ, ಶಾಲೆಯಲ್ಲಿ ಕೈ ತೊಳೆಯುವ ಸ್ಥಳ ಮತ್ತು ಶೌಚಾಲಯದಲ್ಲಿರಿಸಿ, ಎಲ್ಲರ ಬಳಕೆಗೆ ಅನುವು ಮಾಡಿದ್ದಾರೆ. ಹೀಗೆ ಮಾಡಿ ಅಂತ ಯಾರೂ ಹೇಳಿರಲಿಲ್ಲ. ಇದು ಶಾಲಾ ಸಂಸತ್ತಿನ ಮಾಸಿಕ ಸಭೆಯಲ್ಲಿ ಆರೋಗ್ಯ ಮತ್ತು ಶುಚಿತ್ವ ಖಾತೆ ಮಂತ್ರಿ ನಿರ್ಣಯಿಸಿದ್ದು!

ಸಮುದಾಯಕ್ಕೂಶುಚಿತ್ವದ ಕಲಿಕೆ

ಕಲಘಟಗಿ ತಾಲ್ಲೂಕು ದೇವಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿ ಸಪ್ನ ಅರ್ಕಸಾಲಿಯವರನ್ನು‘ವಾಷ್‌’ ಕಾರ್ಯಕ್ರಮಕ್ಕಾಗಿ ಉಸ್ತುವಾರಿಯಾಗಿಸಿದ್ದಾರೆ. ‘ವಾಷ್‌’ ನಂತರ ಮಕ್ಕಳೆಲ್ಲ ಶುಚಿತ್ವದ ವಿಷಯದಲ್ಲಿ ‘ಭೇಷ್‌’ ಆಗಿದ್ದಾರಂತೆ.

‘ಈ ಕಾರ್ಯಕ್ರಮಕ್ಕೆ ಮುನ್ನ ಮಕ್ಕಳಲ್ಲಿ ಸ್ವಲ್ಪ ಆರೋಗ್ಯದ ಸಮಸ್ಯೆ ಇತ್ತು. ಇದಕ್ಕೆ ಸ್ವಚ್ಛವಾಗಿ ಕೈ ತೊಳೆಯದಿರುವುದೇ ಕಾರಣ ಎಂದು ಹಿರಿಯ ಸುಗಮಕಾರ ಬಸವರಾಜ ಚಿನಗುಂಡಿ ಅವರಿಂದ ತಿಳಿದುಬಂತು. ಎರಡು ವರ್ಷಗಳ ‘ವಾಷ್‌’ ಕಾರ್ಯಕ್ರಮದ ಪರಿಣಾಮ ಮಕ್ಕಳಲ್ಲಿ ಶುಚಿತ್ವದ ಅರಿವು ಮೂಡಿದೆ.ಆರೋಗ್ಯ ಸಮಸ್ಯೆ ಬಿಲ್‌ಕುಲ್ ಇಲ್ಲ. ಕೊರೊನಾ –ಲಾಕ್‌ಡೌನ್ ಅವಧಿಯಲ್ಲಿ ಆ ಅರಿವು ಇನ್ನೂ ಹೆಚ್ಚಾಗಿದೆ. ಹೀಗಾಗಿಯೇ ದೇವಿಕೊಪ್ಪದಲ್ಲಿ ಮಕ್ಕಳಿಂದ ಕೊರೊನಾ ಸೋಂಕು ಹರಡುವಿಕೆಯನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಕುಮಾರ.

ವಾಷ್‌ ಬೇಸಿನ್– ಶೌಚಾಲಯ ನಿರ್ಮಾಣ

ಈ ಸರ್ಕಾರಿ ಶಾಲೆಯ ಮಕ್ಕಳುವರ್ಷದಲ್ಲಿ ಎರಡು ಬಾರಿ ನೀರು ಮತ್ತು ನೆಲ ನಿರ್ವಹಣೆ ಸಂಸ್ಥೆ ‘ವಾಲ್ಮಿ’ ಹಾಗೂ ಹಳ್ಳಿಗೇರಿಯ ‘ನೇಚರ್ ಫಸ್ಟ್ ಇಕೋ ವಿಲೇಜ್’ಗೆ ಕ್ಷೇತ್ರ ಭೇಟಿ ನೀಡಿ, ಅಲ್ಲಿನ ಪ್ರಾಯೋಗಿಕ ಮಾದರಿಗಳನ್ನು ತಮ್ಮ ಶಾಲೆಗಳಲ್ಲಿ ಅಳವಡಿಸಿಕೊಳ್ಳಲು ಯೋಜಿಸುತ್ತಿದ್ದಾರೆ. ಈಗಾಗಲೇ 16 ಶಾಲೆಗಳಲ್ಲಿ ಬಿಸಿಯೂಟದ ಬಳಿಕ ಕೈ ತೊಳೆಯಲು ‘ವಾಷ್ ಬೇಸಿನ್’ ಕಟ್ಟಲಾಗಿದೆ. ಒಟ್ಟು ಯೋಜನಾ ವೆಚ್ಚದ ಶೇ. 10 ರಷ್ಟು ಸಮುದಾಯದ ಸಹಭಾಗಿತ್ವದಲ್ಲಿ, ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ, ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಕಿಶೋರಿಯರಿಗಾಗಿ ಸುಸಜ್ಜಿತ ಶೌಚಾಲಯಗಳನ್ನು ಕಟ್ಟಿಕೊಡಲಾಗಿದೆ. ದುರಸ್ತಿಗೂ ಸಹಾಯ ಒದಗಿಬಂದಿದೆ.

ಕೊರೊನಾ ಸಂದರ್ಭದಲ್ಲಿ ಸರ್ಕಾರ ಕೈ ತೊಳೆಯುವುದರ ಮಹತ್ವ ಹೇಳಲಾರಂಭಿಸಿದೆ. ಆದರೆ, ಎರಡು ವರ್ಷಗಳಿಂದ 67 ಶಾಲೆಗಳ, 15 ಸಾವಿರ ಮಕ್ಕಳಿಗೆ ‘ವಾಷ್’ ತಲುಪಿದ ಪರಿಣಾಮ, ಈ ಶಾಲಾ ಮಕ್ಕಳಿಂದ ಕೊರೊನಾ ಸರಪಳಿ ತುಂಡರಿಸಲು ಸಾಧ್ಯವಾಗಿದೆ.

ಧಾರವಾಡ ತಾಲ್ಲೂಕು ಅಳ್ನಾವರದ ಕಸ್ತೂರಬಾ ಗಾಂಧಿ ಗ್ರಾಮೀಣ ಗುರುಕುಲದ 9ನೇ ತರಗತಿ ವಿದ್ಯಾರ್ಥಿನಿ ವಾಣಿಶ್ರೀ ಹೇಳುವಂತೆ, ‘ನಮ್ಮ ಶಾಲೆಯೊಳಗೆ ಜಲ ದಿನ, ವಿಶ್ವ ಪರಿಸರ, ಕೈ ತೊಳೆಯುವ ದಿನ ಹಾಗೂ ವಿಶ್ವ ಶೌಚಾಲಯ ದಿನ – ಇವೆಲ್ಲವನ್ನೂ ತಪ್ಪದ ಆಚರಿಸ್ತೇವ್ರಿ. ಈಗ ನಮ್ಮ ಮನೆಯೊಳಗ ಕೊರೊನಾ ಸಂದರ್ಭದಲ್ಲಿ ಕಾಯಿಪಲ್ಯೆ ತೊಳೆದು ಬಿಸಿಲಿಗೆ ಒಣಗಿಸಿ, ಬಳಸೋದರಿಂದ ಹಿಡಿದು, ಸ್ವಚ್ಛವಾಗಿ ಕೈ ತೊಳೆಯುವ, ಮೂಗು, ಬಾಯಿ ಹಾಗೂ ಕಣ್ಣು ಅನಾವಶ್ಯಕ ಮುಟ್ಟಿಕೊಳ್ಳದೇ ಇರುವ ತಿಳಿವಳಿಕೆ ಬಂದಿದ್ದು ವಾಷ್‍ನಿಂದ. ಈಗ ಆಚರಣೆಗೆ ಸೀಮಿತ ಅಲ್ರೀ.. ನಮಗ ಜೀವನ ವ್ರತ’.

ಇನ್ನು ಶಾಲೆ ಆರಂಭ ಆಗೋದು ಬಾಕಿ!

****

ಎಸ್.ವಿ.ವೈ.ಎಂ ಸಂಸ್ಥೆ, 2 ವರ್ಷಗಳಿಂದ ಟಾಟಾ ಮೋಟರ್ಸ್, ಕಾಲ್‍ಕಮ್ ಹಾಗೂ ಎಚ್.ಡಿ.ಬಿ. ಫೈನಾನ್ಶಿಯಲ್ ಸರ್ವಿಸಸ್ ಕಂಪನಿಗಳ ‘ಸಿ.ಎಸ್.ಆರ್’ ವಂತಿಗೆ ನೆರವಿನಿಂದ, ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿಯ 67 ಶಾಲೆಗಳಲ್ಲಿ ‘ಸಮಗ್ರ ಶಿಕ್ಷಣ ಪ್ರಕಲ್ಪ’ ಯೋಜನೆ ಅಡಿ, ‘ವಾಷ್’ ಕಾರ್ಯಕ್ರಮ ನಡೆಸುತ್ತಿದೆ. 67 ಕ್ಷೇತ್ರ ಸುಗಮಕಾರರು (ಫೆಸಿಲಿಟೇಟರ್ಸ್) ಮಕ್ಕಳಿಗೆ ಬಿಸಿಯೂಟ ಬಡಿಸುವ ಅಡುಗೆ ಸಹಾಯಕರಿಗೂ ಸಹಕಾರ ರೂಪದಲ್ಲಿ ವಾರ್ಷಿಕ ₹900 ಮೌಲ್ಯದ ‘ಹೈಜಿನ್ ಕಿಟ್’ ನೀಡುತ್ತಿದ್ದಾರೆ. 15 ಸಾವಿರ ಮಕ್ಕಳು, 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ‘ವಾಷ್’ ಲಾಭ ದೊರೆತಿದೆ.

ಜಯಂತ್ ಕೆ.ಎಸ್. ಸಂಯೋಜಕರು, ಎಸ್.ವಿ.ವೈ.ಎಂ. ಉ.ಕ. ವಿಭಾಗ, ಧಾರವಾಡ

‘ವಾಷ್’ ಕುರಿತ ಮಾಹಿತಿಗಾಗಿ ಸಂಪರ್ಕ: 96866 31091

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.