ಹುಬ್ಬಳ್ಳಿ: ‘ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅವಘಡದಲ್ಲಿ ಎಎಸ್‌ಐ ನಾಬಿರಾಜ ದಯಣ್ಣವರ ಮೃತಪಟ್ಟ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅವಘಡಕ್ಕೆ ಸಂಬಂಧಿಸಿ ಈಗಾಗಲೇ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಎಎಸ್‌ಐ ಮೃತಪಟ್ಟಿದ್ದರಿಂದ ಗಂಭೀರ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಲಾಗುವುದು. ಜೊತೆಗೆ ಸಂಬಂಧಿಸಿದ ಎಲ್ಲರನ್ನೂ ತನಿಖಾ ವ್ಯಾಪ್ತಿಗೆ ತರಲಾಗುವುದು’ ಎಂದರು.
‘ನೊಂದ ಕುಟುಂಬದವರು ವಕೀಲರನ್ನು ಸಂಪರ್ಕಿಸಿಯೇ 19 ಮಂದಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಕಾಮಗಾರಿ ವ್ಯಾಪ್ತಿಗೆ ಯಾರ‍್ಯಾರು ಬರುತ್ತಾರೋ ಎಲ್ಲರೂ ಜವಾಬ್ದಾರರು. ಪೊಲೀಸ್ ಇಲಾಖೆ ವ್ಯಕ್ತಿಯೇ ಮೃತಪಟ್ಟಿರುವುದರಿಂದ ಪ್ರಕರಣದ ತನಿಖೆಯನ್ನು ಸಮುದಾಯ ಸೂಕ್ಷ್ಮವಾಗಿ ನೋಡುತ್ತದೆ. ಹೀಗಾಗಿ ಯಾರನ್ನೂ ಇದರಿಂದ ಹೊರಗೆ ಇಡುವ ಪ್ರಶ್ನೆಯೇ ಇಲ್ಲ. ಈಗ ನಮ್ಮ ಸಿಬ್ಬಂದಿಗೆ, ನಾಳೆ ಇನ್ಯಾರಿಗೋ ಆಗಬಹುದು. ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಂಪನಿ ಕಾಮಗಾರಿ ನಡೆಸುತ್ತಿರುವುದರಿಂದ ನೋಟಿಸ್ ನೀಡಿ ಬಂದ್ ಮಾಡಿಸಿದ್ದೇವೆ. ನಗರದಲ್ಲಿರುವ ಎರಡೂ ಕಚೇರಿಯನ್ನು ಬಂದ್ ಮಾಡಿರುವುದು ಸಹ ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು.
ನೇತ್ರದಾನ: ಎಎಸ್‌ಐ ನಾಬಿರಾಜ ದಯಣ್ಣವರ ಇಚ್ಛೆಯಂತೆ ಕೆಎಂಸಿ–ಆರ್‌ಐ ಆಸ್ಪತ್ರೆಗೆ ಕುಟುಂಬದವರು ನೇತ್ರದಾನ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ಸತ್ತೂರಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.
‘ದೇಹ ಹಾಗೂ ಅಂಗಾಂಗಗಳನ್ನು ದಾನ ಮಾಡಬೇಕೆನ್ನುವ ಇಚ್ಛೆ ನಾಬಿರಾಜ ಹೊಂದಿದ್ದರು. ಅಂಗಾಗಗಳೆಲ್ಲ ನಿಷ್ಕ್ರಿಯವಾಗಿದ್ದರಿಂದ ದಾನ ಮಾಡಲು ಸಾಧ್ಯವಾಗಿಲ್ಲ. ಕಣ್ಣುಗಳನ್ನು ದಾನ ಮಾಡಿದ್ದೇವೆ. ಸಾವಿನಲ್ಲೂ ಸಾರ್ಥಕತೆ ಪಡೆದ ಜೀವ ಅದು’ ಎಂದು ನಾಬಿರಾಜ ಅವರ ಮಾವ ಶಾಂತರಾಜ ಹೇಳಿದರು.
ಕಪ್ಪುಪಟ್ಟಿಗೆ ಸೇರಿಸಿ: ‘ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾದ ದಿನದಿಂದ ಈವರೆಗೆ ಮೂರು ಅವಘಡಗಳು ಸಂಭವಿಸಿವೆ. ಮೊನ್ನೆ ನಡೆದ ಅವಘಡದಲ್ಲಿ ಎಎಸ್‌ಐ ಅವರ ಪ್ರಾಣವೇ ಹೋಯಿತು. ಹೀಗೆ ಮೇಲಿಂದ ಮೇಲೆ ಅವಘಡಗಳು ನಡೆಯುತ್ತಿದ್ದು, ಸರ್ಕಾರ ಅಂತಹ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವರಿಗೆ ಕಾಮಗಾರಿ ಹಣವಷ್ಟೇ ಬೇಕು. ಸಾರ್ವಜನಿಕರ ರಕ್ಷಣೆ ಬೇಡ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೇ ನೇರ ಹೊಣೆ ಮಾಡಬೇಕು. ಈವರೆಗೆ ಗುತ್ತಿಗೆ ಪಡೆದ ಕಂಪನಿಯವರಾಗಲಿ, ಪ್ರಾಧಿಕಾರದವರಾಗಲಿ ಒಬ್ಬರೂ ಭೇಟಿಯಾಗಿಲ್ಲ’ ಎಂದು ನಾಬಿರಾಜ ಅವರ ಸಂಬಂಧಿ ಅಭಿನಂದನ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.