ಹುಬ್ಬಳ್ಳಿ: ನಗರದ ಗಿರಣಿಚಾಳ ಹಾಗೂ ಹೊಸೂರು ಕೊಳೆಗೇರಿ ನಿವಾಸಿಗಳು ಹಕ್ಕುಪತ್ರಕ್ಕಾಗಿ 30 ವರ್ಷಗಳಿಂದ ಸುದೀರ್ಘ ಹೋರಾಟ ನಡೆಸಿದ್ದಾರೆ. ಆದರೆ, ಈವರೆಗೆ ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ.
ಎರಡೂ ಕೊಳೆಗೇರಿಗಳಲ್ಲಿ ನೂರಾರು ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿವೆ. ಗಿರಣಿಚಾಳ ಕೊಳೆಗೇರಿ ಜಾಗದ ಪ್ರಕರಣ ಹೈಕೋರ್ಟ್‌ನಲ್ಲಿದ್ದು, ಹೊಸೂರು ಕೊಳೆಗೇರಿ ಜಾಗ ಖಾಸಗಿಯವರದ್ದಾಗಿದೆ. ತಲೆಮಾರುಗಳಿಂದ ಇಲ್ಲೇ ವಾಸಿಸುತ್ತಿರುವ ಕಾರಣ, ಇದೇ ಜಾಗದ ಹಕ್ಕುಪತ್ರ ನೀಡಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.
‘ಗಿರಣಿಚಾಳ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಮೊದಲು ನೆಪ ಹೇಳುತ್ತಿದ್ದರು. ಈಗ ಹೈಕೋರ್ಟ್ ಕಡೆ ಬೊಟ್ಟು ಮಾಡುತ್ತಾರೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಪ್ರಕರಣ ಇತ್ಯರ್ಥವಾಗುತ್ತದೆ. ಪಾಲಿಕೆ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ನಡುವೆ ಸಮನ್ವಯ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಬಗೆಹರಿದಿಲ್ಲ’ ಎಂದು ಹೋರಾಟಗಾರ ಮೋಹನ ಹಿರೇಮನಿ ಆರೋಪಿಸಿದರು.
‘ಕೊಳೆಗೇರಿಗಳ ಜನರು ಪಾಲಿಕೆಗೆ ತೆರಿಗೆ ಪಾವತಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ್ದರೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಗಿರಣಿಚಾಳದಲ್ಲಿ ವಸತಿ ಯೋಜನೆಯಡಿ 126 ಮನೆಗಳನ್ನು ನಿರ್ಮಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. ಕೆಲ ನಿವಾಸಿಗಳು ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.
‘ವೀರಮಾರುತಿನಗರ, ಯಾವಗಲ್ ಪ್ಲಾಟ್ ಒಳಗೊಂಡ ಹೊಸೂರು ಕೊಳೆಗೇರಿ ಜಾಗ ಖಾಸಗಿಯವರದ್ದು ಎಂಬ ಕಾರಣಕ್ಕೆ ಈ ಮೊದಲು ಹಕ್ಕುಪತ್ರ ವಿತರಣೆಗೆ ನಿರಾಕರಿಸಿದ್ದರು. ಆನಂತರ ಪರಿಚಯಪತ್ರ ನೀಡುವುದಾಗಿಯೂ ಹೇಳಿದರು. ಸರ್ವೆ ಮಾಡಿ, ಮನೆಗಳಿಗೆ ನಂಬರ್ ಹಾಕಿ, ದಾಖಲೆ ಸಂಗ್ರಹಿಸಿದ್ದರು. ಈವರೆಗೆ ಯಾವುದೇ ಪತ್ರ ನೀಡಿಲ್ಲ. ಪಕ್ಕದಲ್ಲೇ ಇದ್ದ ಕುಲಕರ್ಣಿ ಚಾಳ ತೆರವು ಮಾಡಿದ್ದರಿಂದ ಹೊಸೂರು ಕೊಳೆಗೇರಿ ನಿವಾಸಿಗಳಿಗೆ ಜಾಗ ಕಳೆದುಕೊಳ್ಳುವ ಆತಂಕವಿದೆ’ ಎಂದು ಸ್ಥಳೀಯ ನಿವಾಸಿ ಗುರುನಾಥ ಈರಪ್ಪ ಉಪ್ಪಲದಡ್ಡಿ ತಿಳಿಸಿದರು.
ನೀತಿ ಸಂಹಿತೆ ಇರುವುದರಿಂದ ಹಕ್ಕುಪತ್ರ ವಿತರಣೆಗೆ ಸಿದ್ಧತೆ ಮಾಡಿಟ್ಟುಕೊಂಡು ಚುನಾವಣೆ ನಂತರವಾದರೂ ನೀಡಬೇಕು
-ಮೋಹನ ಹಿರೇಮನಿ ಹೋರಾಟಗಾರ
‘ಮಂಡಳಿಗೆ ಹಸ್ತಾಂತರಿಸಿದರೆ ಹಕ್ಕುಪತ್ರ’
‘ಗಿರಣಿಚಾಳದ ಜಾಗ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರವಾಗಿಲ್ಲ. ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥಪಡಿಸಿ ಜಾಗವನ್ನು ಮಂಡಳಿ ಹೆಸರಿಗೆ ಮಾಡಿದರೆ ಹಕ್ಕುಪತ್ರ ನೀಡಲಾಗುವುದು’ ಎಂದು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ವಿ. ಹಿರೇಮಠ ಹೇಳಿದರು. ‘ಹೊಸೂರು ಕೊಳೆಗೇರಿ ಜಾಗ ಸರ್ಕಾರಿ ಜಮೀನಾಗಿದ್ದರೆ ಹಕ್ಕುಪತ್ರ ನೀಡಲು ಅವಕಾಶವಿತ್ತು. ಅಲ್ಲಿನ ಜನರಿಗೆ ಬೇರೆಡೆ ಜಾಗ ನೀಡುವ ಕಾರ್ಯವೂ ಮಂಡಳಿಯದ್ದಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮನವಿ ಸಲ್ಲಿಕೆ’
‘ಗಿರಣಿಚಾಳ ಜಾಗದ ಪ್ರಕರಣ ಇತ್ಯರ್ಥಕ್ಕೆ ಹೈಕೋರ್ಟ್ ನೇಮಿಸಿದ ಲಿಕ್ವಿಡೇಟರ್ ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಮನವಿ ಸಲ್ಲಿಸಬೇಕಿತ್ತು. ಸದ್ಯ ಪಾಲಿಕೆಯಿಂದ ಮನವಿ ಸಲ್ಲಿಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.