ಹುಬ್ಬಳ್ಳಿ: ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರದಿಂದ ಆರಂಭವಾದ ಕೃಷಿ ಮೇಳದಲ್ಲಿ ಸುಧಾರಿತ ಕೃಷಿ ಉಪಕರಣಗಳು ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಲಾಗಿದೆ.
ರೈತರು ಮುಗಿಬಿದ್ದು ಯಂತ್ರಗಳನ್ನು ಬೆರಗಿನಿಂದ ವೀಕ್ಷಿಸಿ, ಅವುಗಳನ್ನು ಬಳಸುವ ವಿಧಾನ, ದರ ಸೇರಿದಂತೆ ಇತ್ಯಾದಿ ಮಾಹಿತಿ ಕಲೆ ಹಾಕುತ್ತಿರುವುದು ವಿಶೇಷವಾಗಿದೆ.
ಬೀಜ ಬಿತ್ತನೆಗೆ ಬಳಕೆಯಾಗುವ ಕೂರಿಗೆ, ಕೀಟನಾಶಕ ಸಿಂಪಡಣೆ ಯಂತ್ರಗಳು, ನೇಗಿಲುಗಳು, ನಾಟಿ ಮಾಡುವ ಯಂತ್ರಗಳು, ಗೊಬ್ಬರ ಮಿಶ್ರಣದೊಂದಿಗೆ ಬೀಜ ಬಿತ್ತನೆ ಮಾಡುತ್ತಲೇ ಹರಗಬಹುದಾದ ಯಂತ್ರಗಳನ್ನು ಬೇರೆ ಬೇರೆ ಕಂಪನಿಗಳು ತಯಾರಿಸಿ ಪ್ರದರ್ಶನಕ್ಕಿಟ್ಟಿವೆ.
ಸಣ್ಣ ರೈತರಿಗೆ ಕೈಗೆ ಎಟುಕುವ ದರದ ಸಣ್ಣ ಮಾದರಿ ಯಂತ್ರಗಳು ಹಾಗೂ ಬೃಹತ್ ಪ್ರಮಾಣದ ಕೃಷಿಗೆ ಬಳಕೆಯಾಗುವ ದೊಡ್ಡ ಮಾದರಿ ಯಂತ್ರಗಳಿಗೆ ಬೇರೆ ಬೇರೆ ದರಗಳನ್ನು ನಿಗದಿ ಮಾಡಲಾಗಿದೆ. ರೈತರು ಎಲ್ಲ ಮಳಿಗೆಗಳಿಗೂ ಭೇಟಿ ನೀಡಿ ದರ ಹಾಗೂ ಅವುಗಳ ಕಾರ್ಯವಿಧಾನವನ್ನು ಹೋಲಿಕೆ ಮಾಡಿ ಪರಿಶೀಲಿಸುತ್ತಿದ್ದಾರೆ.
’ಮೇಳದಲ್ಲಿ ಬಂದಿರುವ ಕೃಷಿ ಯಂತ್ರಗಳನ್ನು ಬಳಕೆ ಮಾಡುವುದಕ್ಕಾಗಿ ಕೆಲವು ರೈತರು ಆರ್ಡರ್ ನೀಡುತ್ತಿರುವುದು ಕಂಡುಬಂತು. ಇನ್ನೊಂದು ವಿಶೇಷವೆಂದರೆ, ಕೃಷಿ ಮೇಳದಲ್ಲಿ ಎಲ್ಲ ಬಗೆಯ ಕೃಷಿ ಯಂತ್ರೋಪಕರಣಗಳಿಗೆ ₹5 ಸಾವಿರ ರಿಯಾಯ್ತಿ ನೀಡಲಾಗುತ್ತಿದೆ. ಸಾಯಿಕೊ ಸ್ಟ್ರಿಪ್ಸ್ ಕಂಪೆನಿಯ ‘ಯೋಧ’ ಹೆಸರಿನ ಯಂತ್ರಗಳು, ಭೂಮಿ ಆಗ್ರೊ ಹೈಟೆಕ್ ಕಂಪನಿಯ ರೋಟವೇಟರ್‌ಗಳು, ಸ್ವಯಂ ಚಾಲಿತ ಬೀಜ ಬಿತ್ತನೆ ಯಂತ್ರಗಳು, ನಡಕಟ್ಟಿನ ಕಂಪನಿಯವರು ಸಿದ್ಧಪಡಿಸಿದ ಕೂರಿಗೆಗಳು, ಅಣ್ಣಿಗೇರಿಯ ಬಿಸ್ಲಿಲ್ಲಾಹ ಎಂಜಿನಿಯರಿಂಗ್ ವರ್ಕ್ಸ್ ತಯಾರಿದ ಬೀಜ ಬಿತ್ತನೆ ಯಂತ್ರ, ಶ್ರೀರಾಮ್ ಆಗ್ರೊಟೆಕ್ ಕಂಪನಿಯ ಕೃಷಿ ಸಲಕರಣೆಗಳು.. ಇನ್ನೂ ಅನೇಕ ಕಂಪನಿಗಳು ಮೇಳದಲ್ಲಿ ತಮ್ಮ ಉಪಕರಣಗಳನ್ನು ಪ್ರದರ್ಶಿಸಿವೆ.
ಟ್ರ್ಯಾಕ್ಟರ್ ಆಧಾರಿತ ಮೋಟರ್ ಪಂಪ್: ಟ್ರ್ಯಾಕ್ಟರ್ ಎಂಜಿನ್ ನೆರವಿನಿಂದ ನೀರೆತ್ತುವುದಕ್ಕೆ ಬಳಸಬಹುದಾದ ಹತ್ತಾರು ಮೋಟರ್ ಪಂಪ್‌ಗಳು, ಟ್ರ್ಯಾಕ್ಟರ್ ಎಂಜಿನ್ ನೆರವಿನಿಂದ ಎಸಿ ವಿದ್ಯುತ್ ಉತ್ಪಾದಿಸುವ (ಜನರೇಟರ್) ಯಂತ್ರಗಳನ್ನು ಕೃಷಿ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ರೈತರು ಮುಗಿಬಿದ್ದು ಮಾಹಿತಿ ಪಡೆಯುತ್ತಿದ್ದಾರೆ.
ಗುಜರಾತ್ ಮೂಲದ ಡಾಕ್ಟರ್ ಪಂಪ್ಸ್ ಕಂಪೆನಿಯು ಕನಿಷ್ಠ 3 ಕೆವಿಯಿಂದ ಗರಿಷ್ಠ 200 ಕೆವಿವರೆಗೂ ಟ್ರ್ಯಾಕ್ಟರ್ ನೆರವಿನಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಸಿದ್ಧಪಡಿಸಿ ಪ್ರದರ್ಶನಕ್ಕೆ ಇರಿಸಿದೆ. ಅಲ್ಲದೆ ಟ್ರ್ಯಾಕ್ಟರ್ ಎಂಜಿನ್ ನೆರವಿನಿಂದ ನೀರೆತ್ತುವುದಕ್ಕೆ ಬಳಸುದಾದ ವಿವಿಧ ಸಾಮರ್ಥ್ಯದ ಮೋಟರ್ ಪಂಪ್‌ಗಳನ್ನು ಕೂಡಾ ಪ್ರದರ್ಶಿಸಿ, ಮಾರಾಟ ಮಾಡುತ್ತಿದೆ. ಎಲ್ಲ ಮಾದರಿಗಳಿಗೂ ದರ ನಿಗದಿ ಪಡಿಸಲಾಗಿದ್ದು, ಮೇಳದಲ್ಲಿ ಬುಕಿಂಗ್ ಮಾಡಿದವರಿಗೆ ₹5 ಸಾವಿರ ರಿಯಾಯ್ತಿ ಘೋಷಿಸಿದೆ.
ಕುತೂಹಲದ ಕೇಂದ್ರವಾದ ಕಬ್ಬು ಕಟಾವು ಯಂತ್ರ
ಕೃಷಿ ಮೇಳದಲ್ಲಿನ ಕೃಷಿ ಯಂತ್ರೋಪಕರಣಗಳ ವಿಭಾಗದಲ್ಲಿ ’ಎಸ್ ಫಾರ್ಮ್‘ ಕಂಪನಿಯ ಸುಧಾರಿತ ಕಬ್ಬು ಕಟಾವು ಯಂತ್ರವು ಕುತೂಹಲದ ಕೇಂದ್ರವಾಗಿದೆ. ಯಂತ್ರವು ಕಬ್ಬನ್ನು ಬೇರಿನಿಂದ ಸ್ವಲ್ಪ ಮೇಲ್ಬಾಗದಿಂದ ಕತ್ತರಿಸಿ ಒಳಗೆ ಎಳೆದುಕೊಳ್ಳುತ್ತದೆ. ಇಡೀ ಕಬ್ಬನ್ನು ಆರು ಅಂಗುಲ ಉದ್ದದ ತುಂಡುಗಳನ್ನಾಗಿ ಮಾಡಿಕೊಳ್ಳುತ್ತದೆ. ಕಬ್ಬಿನ ತುಂಡುಗಳಲ್ಲಿ ಹಗುರವಾದ ಮತ್ತು ಭಾರವಾದ ತುಂಡುಗಳನ್ನು ಪ್ರತ್ಯೇಕಿಸಿಕೊಂಡು ಮುನ್ನುಗುತ್ತದೆ. ಇದರ ಬೆಲೆ ₹96 ಲಕ್ಷ. ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಮೂಲದ ಈ ಕಂಪನಿಯು ಕರ್ನಾಟಕದಲ್ಲಿ ಈಗಾಗಲೇ 8 ಯಂತ್ರಗಳನ್ನು ಮಾರಾಟ ಮಾಡಿದೆ. 17 ಯಂತ್ರಗಳಿಗೆ ಬುಕಿಂಗ್ ಪಡೆದುಕೊಂಡಿದೆ. ’ಕರ್ನಾಟಕದಲ್ಲಿ ಕಬ್ಬು ಹೆಚ್ಚು ಬೆಳೆಯುವ ವಿಜಯಪುರ ಬೆಳಗಾವಿ ಬಾಗಲಕೋಟೆ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಈಗಾಗಲೇ ಕಬ್ಬು ಕಟಾವು ಯಂತ್ರಗಳನ್ನು ದೊಡ್ಡ ರೈತರು ಹಾಗೂ ಸಕ್ಕರೆ ಕಾರ್ಖಾನೆಯವರು ಖರೀದಿಸಿದ್ದಾರೆ. ಎಲ್ಲ ಕಡೆಗೂ ಉತ್ತಮ ಸ್ಪಂದನೆ ಇದೆ‘ ಎಂದು ಕಂಪನಿಯ ಕರ್ನಾಟಕ ರಾಜ್ಯದ ಸಹಾಯಕ ಸೇಲ್ಸ್ ಮ್ಯಾನೇಜರ್ ನಿತೀನ್ ಗುರವ ‘ಪ್ರಜಾವಾಣಿ‘ಗೆ ತಿಳಿಸಿದರು.
ಕರ್ನಾಟಕದಲ್ಲಿ ಈಚೆಗೆ ಡಾಕ್ಟರ್ ಪಂಪ್ಸ್ ಖರೀದಿ ಪ್ರಮಾಣ ಹೆಚ್ಚಾಗುತ್ತಿದೆ. ಹುಬ್ಬಳ್ಳಿಯಲ್ಲೂ ಡೀಲರ್ ಇದ್ದು ರೈತರು ಇದರ ಅನುಕೂಲ ಮಾಡಿಕೊಳ್ಳಬಹುದಾಗಿದೆ–ರಮೇಶ ಸೊಲಂಕಿ ಡಾಲ್ಟರ್ ಪಂಪ್ಸ್ ಆಲ್ ಇಂಡಿಯಾ ಸೇಲ್ಸ್ ಮ್ಯಾನೇಜರ್
ಕೃಷಿ ಮೇಳದಲ್ಲಿ ಯಂತ್ರೋಪಕರಣಗಳು ಸಾಕಷ್ಟು ಬಂದಿದ್ದು ರೈತರಿಗೆ ಅನುಕೂಲ ಆಗುತ್ತವೆ. ಸದ್ಯಕ್ಕೆ ಮಾಹಿತಿ ಪಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಯಂತ್ರಗಳನ್ನು ಖರೀದಿಸುತ್ತೇವೆ– ರಾಜಾಸಾಬ್ ನದಾಪ್ ರೈತ ಜಂತ್ಲಿ ಶಿರೂರ ತಾ.ಮುಂಡರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.