ADVERTISEMENT

Dharwad Krishi Mela | ಅಗ್ಗದ ದರದಲ್ಲಿ ಕೃಷಿ ಉಪಕರಣ

ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಶೋಧನೆ: ಸಣ್ಣ ರೈತರಿಗೆ ಅನುಕೂಲ

ಶಿವರಾಯ ಪೂಜಾರಿ
Published 23 ಸೆಪ್ಟೆಂಬರ್ 2024, 5:24 IST
Last Updated 23 ಸೆಪ್ಟೆಂಬರ್ 2024, 5:24 IST
ಧಾರವಾಡದ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ಮಲ್ಚಿಂಗ್ ಹಾಕುವ ಸಾಧನ
ಧಾರವಾಡದ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ಮಲ್ಚಿಂಗ್ ಹಾಕುವ ಸಾಧನ   

ಹುಬ್ಬಳ್ಳಿ: ಸಣ್ಣ ಮತ್ತು ಅತೀ ಸಣ್ಣ ಭೂಮಿ ಹೊಂದಿರುವ ರೈತರಿಗೆ ಉಪಯುಕ್ತವಾಗಲು ಕಡಿಮೆ ಖರ್ಚಿನಲ್ಲಿ ಕೃಷಿ ಉಪಕರಣಗಳನ್ನು ಧಾರವಾಡ ಕೃಷಿ ಮಹಾವಿದ್ಯಾಲಯದ ಬಿಎಸ್ಸಿ ಅಗ್ರಿ ಪದವೀಧರ ವಿದ್ಯಾರ್ಥಿಗಳು ಸಂಶೋಧನೆ ಮಾಡಿದ್ದು, ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿವೆ.

ಬೆಳೆ ಕಟಾವು ಬಳಿಕ ಧಾನ್ಯಗಳನ್ನು ಸ್ವಚ್ಛಗೊಳಿಸುವ ಸಾಧನ, ತೊಗರಿ ಬೆಳೆಯ ಕುಡಿ ಚಿವುಟುವ ಸಾಧನ, ಪ್ಲಾಸ್ಟಿಕ್ ಮಲ್ಟಿಂಗ್ ಶೀಟ್ ಅಳವಡಿಸುವ ಯಂತ್ರ ಸಂಶೋಧಿಸಿದ್ದಾರೆ. ಇವು ರೈತರಿಗೆ ವರದಾನವಾಗಿದ್ದು, ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ತಯಾರು ಮಾಡಬಹುದು.

ಕಾಳು ಸ್ವಚ್ಛಗೊಳಿಸುವ ಸಾಧನ:  ಬೆಳೆಗಳನ್ನು ಕಟಾವು ಮಾಡಿದ ಬಳಿಕ ಧಾನ್ಯಗಳನ್ನು ಗಾಳಿಗೆ ತೂರಿ ಸ್ವಚ್ಛಗೊಳಿಸುವುದು ಸಾಂಪ್ರದಾಯಿಕ ಪದ್ಧತಿ. ಆದರೆ ಕಾಳುಗಳನ್ನು ಸ್ವಚ್ಛಗೊಳಿಸಲು ಕೂಲಿ ಆಳುಗಳ ಕೊರತೆ ಇದೆ. ಕೂಲಿಕಾರರು ಸಿಕ್ಕರೂ ಕಾಳು ಸ್ವಚ್ಛಗೊಳಿಸುವ ಪ್ರಕ್ರಿಯೆ ದೀರ್ಘವಾಗಿರುವ ಕಾರಣ ಕೂಲಿಗೆ ಹೆಚ್ಚು ವೆಚ್ಚ ತಗಲುತ್ತದೆ. ಹೀಗಾಗಿ ರೈತರಿಗೆ ಅನುಕೂಲವಾಗಲು ಧಾನ್ಯವನ್ನು ಸ್ವಚ್ಛಗೊಳಿಸುವ ಸಾಧನವನ್ನು ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಸಂಶೋಧಿಸಿದ್ದಾರೆ.

ADVERTISEMENT

‘ಒಂದು ಡ್ರಮ್, ಒಂದು ಟೇಬಲ್ ಫ್ಯಾನ್, ಮೂರು ಅಡಿಯ ಸ್ಟ್ಯಾಂಡ್, ಒಂದು ಪ್ಲಾಸ್ಟಿಕ್ ಬುಟ್ಟಿ ಬಳಸಿ ಈ ಸಾಧನ ತಯಾರಿಸಬಹುದು. ಇದರಿಂದ ಧಾನ್ಯಗಳಿಂದ ಕಸ, ಒಣಗಿದ ಎಲೆ, ಜೊಳ್ಳುಕಾಳುಗಳನ್ನು ಸುಲಭವಾಗಿ ಬೇರ್ಪಡಿಸಿ, ಒಂದು ಗಂಟೆಗೆ 8ರಿಂದ 10 ಕ್ವಿಂಟಾಲ್‌ನಷ್ಟು ಕಾಳುಗಳನ್ನು ಸ್ವಚ್ಛಗೊಳಿಸಬಹುದು. ಸುಮಾರು ₹1,800 ಖರ್ಚಿನಲ್ಲಿ ಈ ಸಾಧನವನ್ನು ಮನೆಯಲ್ಲಿಯೇ ತಯಾರಿಸಬಹುದು ಎನ್ನುತ್ತಾರೆ’ ವಿದ್ಯಾರ್ಥಿಗಳಾದ ರೋಹಿತ್ ಕೆ. ಹಾಗೂ ತಂಡ.

ತೊಗರಿಯಲ್ಲಿ ಕುಡಿ ಚಿವುಟುವ ಸಾಧನ:  ತೊಗರಿ ಬೆಳೆಯಲ್ಲಿ ಕುಡಿ ಚಿವುಟುವುದು ಪ್ರಮುಖ ಕೃಷಿ ಚಟುವಟಿಕೆ. ಬೆಳೆಯು 45ರಿಂದ 50 ದಿನ ಇರುವಾಗ ಕುಡಿ ಚಿವುಟುತ್ತಾರೆ. ಇದರಿಂದ ಶೇ 30ರಷ್ಟು ಇಳುವರಿ ಹೆಚ್ಚಿಸಬಹುದು. ಆದರೆ ಒಂದು ಎಕರೆಗೆ ಕುಡಿ ಚಿವುಟಲು ಸುಮಾರು 7ರಿಂದ 8 ಕೂಲಿಕಾರರು ಬೇಕು. ಇದಕ್ಕೆ ಪರ್ಯಾಯ ವಿಧಾನದಲ್ಲಿ ಯಂತ್ರದ ಮೂಲಕ ಕುಡಿ ಚಿವುಟುವ ಸಾಧನವನ್ನು ವಿದ್ಯಾರ್ಥಿಗಳು ಕೇವಲ ₹500 ವೆಚ್ಚದಲ್ಲಿ ಕಂಡುಹಿಡಿದಿದ್ದಾರೆ.

ಪೈಪ್, ಎಲ್ಬೋ, 1 ಡಿಸಿ ಮೋಟಾರ್, 2 ರೇಡಿಯಮ್ ಕಟ್ ಮಾಡುವ ಬ್ಲೇಡ್, ಬಾಟಲಿ ಕ್ಯಾಪ್, ಎಲೆಕ್ಟ್ರಿಕ್ ತಂತಿ, ಪವರ್ ಸ್ಟ್ರೆಯರ್ ಬ್ಯಾಟರಿ ಕನೆಕ್ಟರ್ ಬಳಸಿ ಈ ಸಾಧನ ತಯಾರಿಸಲಾಗಿದೆ. ಇದರ ಮೂಲಕ ಒಬ್ಬ ವ್ಯಕ್ತಿ ಒಂದು ದಿನದಲ್ಲಿ 2 ಎಕರೆ ಪ್ರದೇಶದಲ್ಲಿ ತೊಗರಿ ಕುಡಿ ಚಿವುಟಬಹುದು. ವಿದ್ಯಾರ್ಥಿಗಳಾದ ಪ್ರಶಾಂತ್, ಅಭಿಷೇಕ, ಭರತ್, ಮಾಳಪ್ಪ ಈ ಸಾಧನ ಕಂಡುಹಿಡಿದಿದ್ದಾರೆ.

ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ ಹಾಕುವ ಸಾಧನ: ಸಾಂಪ್ರದಾಯಿಕ ಕೃಷಿ ಬದಲಿಗೆ ಕಡಿಮೆ ಖರ್ಚು, ಕಡಿಮೆ ನೀರಿನಲ್ಲಿ ಬೆಳೆ ಬೆಳೆಯಲು ಪ್ಲಾಸ್ಟಿಕ್‌ ಮಲ್ಚಿಂಗ್‌ನಂಥ ಸುಲಭ ಮತ್ತು ಸರಳ ಪದ್ಧತಿಯಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೈತರು ಬೆಳೆ ಬೆಳೆಯುತ್ತಿದ್ದಾರೆ. ಟ್ರ್ಯಾಕ್ಟರ್ ಬಳಸಿ ಮಲ್ಚಿಂಗ್ ಮಾಡುವುದರಿಂದ ಹೆಚ್ಚಿನ ಖರ್ಚು ತಗಲುತ್ತದೆ. ಇದನ್ನರಿತ ಕೃಷಿ ವಿದ್ಯಾರ್ಥಿಗಳ ತಂಡ ರೈತರಿಗೆ ಅನುಕೂಲವಾಗಲು ಸುಲಭ ಸಾಧನ ಕಂಡುಹಿಡಿದಿದೆ.

‘ಈ ಸಾಧನ ಬಳಸಿ ಮಲ್ಚಿಂಗ್‌ ಮಾಡುವುದರಿಂದ ಸಸಿಗಳಿಗೆಲ್ಲ ಸಮನಾಗಿ ನೀರು ಮತ್ತು ಗೊಬ್ಬರ ಸಿಗುತ್ತದೆ. ಕಳೆಯೂ ಬೆಳೆಯುವುದಿಲ್ಲ. ಹದ ಅರಿತು ನೀರು ಕೊಟ್ಟರೆ ಸಾಕು, ಉತ್ತಮ ಇಳುವರಿ ಸಿಗುತ್ತದೆ. ಎರಡು ಸೈಕಲ್ ಗಾಲಿ, ಡಿಸ್ಕ್ ತಟ್ಟೆ, ಕಬ್ಬಿಣದ ರೋಲರ್ ಶಾಫ್ಟ್, ಕಬ್ಬಿಣದ ಹ್ಯಾಲೋ ಟ್ಯೂಬ್ ಫ್ರೇಮ್ ಬಳಸಿಕೊಂಡು ಮನೆಯಲ್ಲಿಯೇ ಈ ಸಾಧನ ತಯಾರಿಸಬಹುದು’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಸಿದ್ರಾಮ ಕೆ., ರವಿಚಂದ್ರ, ಎಸ್‌.ಗಂಗಾಧರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.