ಹುಬ್ಭಳ್ಳಿ: ‘ರೇಷ್ಮೆ ಹುಳು ಸಾಕಣೆ ಮನೆ ನಿರ್ಮಾಣ, ಹಿಪ್ಪುನೇರಳೆ ಸಸಿ ಬೆಳೆಸಲು ಪ್ರೋತ್ಸಾಹಧನ ಸಿಗುವುದೇ? ಗುಣಮಟ್ಟದ ರೇಷ್ಮೆ ಗೂಡು ಮಾರಾಟದಿಂದ ಎಷ್ಟು ಲಾಭ ಸಿಗುತ್ತದೆ? ಇಲ್ಲಿ ಮಾರುಕಟ್ಟೆ ಇದಿಯಾ?..
– ಇಂತಹ ಹಲವು ಪ್ರಶ್ನೆಗಳನ್ನು ಯುವ ರೈತರು ಹಾಗೂ ಕೃಷಿ ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಆಸಕ್ತಿಯಿಂದ ರೇಷ್ಮೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೇಳಿ, ಮಾಹಿತಿ ಪಡೆಯುತ್ತಿದ್ದ ದೃಶ್ಯ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾನುುವಾರ ಕಂಡು ಬಂತು.
ಬೆಂಗಳೂರು ಗ್ರಾಮೀಣ, ರಾಮನಗರ, ಕನಕಪುರ, ಚನ್ನಪಟ್ಟಣ, ಮೈಸೂರು, ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ರೇಷ್ಮೆ ಕೃಷಿ ಇದೀಗ ಧಾರವಾಡ ಜಿಲ್ಲೆಗೆ ವಿಸ್ತಾರಗೊಂಡಿದೆ. ಇಲ್ಲಿನ ಯುವ ರೈತರು, ಕೃಷಿ ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಣೆ ಮಾಡಲು ಆಸಕ್ತಿ ತೋರುತ್ತಿದ್ದಾರೆ.
560 ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ: ‘ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದ್ದು, ಈಗಾಗಲೇ ಜಿಲ್ಲೆಯ 102 ಗ್ರಾಮಗಳಲ್ಲಿ 280 ಜನ ರೈತರು 560ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ರೇಷ್ಮೆ ಹುಳು ಸಾಕಣೆಗೆ ಮನೆ ನಿರ್ಮಾಣಕ್ಕೆ ಹಾಗೂ ಹಿಪ್ಪುನೇರಳೆ ಸಸಿ ಬೆಳೆಸಲು ಇಲಾಖೆಯಿಂದ ಅಗತ್ಯ ಪ್ರೋತ್ಸಾಹಧನ ಸಿಗುತ್ತಿರುವುದರಿಂದ ಯುವ ರೈತರ ರೇಷ್ಮೆ ಬೆಳೆಯತ್ತ ಮುಖ ಮಾಡುತ್ತಿದ್ದಾರೆ‘ ಎಂದು ರೇಷ್ಮೆ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಕೆ.ಎಚ್.ಪೂಜಾರ ಮಾಹಿತಿ ನೀಡಿದರು.
ಉತ್ತಮ ಮಾರುಕಟ್ಟೆ: ‘ಜಿಲ್ಲೆಯು ರೇಷ್ಮೆ ಅಭಿವೃದ್ಧಿಗೆ ಅನುಕೂಲವಾಗುವ ಸೂಕ್ತ ವಾತಾವರಣ ಹಾಗೂ ಪೂರಕ ಸೌಲಭ್ಯ ಹೊಂದಿದ್ದು, ಖಾಸಗಿ ಚಾಕಿ ಸಾಕಣೆ ಕೇಂದ್ರಗಳು ಜಿಲ್ಲೆಯ ರೈತರಿಗೆ ಗುಣಮಟ್ಟದ ಚಾಕಿ ಹುಳುಗಳನ್ನು ವಿತರಿಸುತ್ತಿವೆ. ಸ್ಥಳೀಯವಾಗಿ ರೇಷ್ಮೆ ಗೂಡು ಮಾರಾಟಕ್ಕೆ ಧಾರವಾಡ ಬಳಿಯ ರಾಯಾಪುರದಲ್ಲಿ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಇದೆ. ಇದರೊಂದಿಗೆ ಶಿರಹಟ್ಟಿ, ಗೋಕಾಕ್, ಹಾವೇರಿ ಹಾಗೂ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿಯೂ ರೇಷ್ಮೆ ಬೆಳೆಗಾರರು ವಹಿವಾಟು ನಡೆಸಬಹುದು’ ಎನ್ನುತ್ತಾರೆ ಅವರು.
ಬೆಳೆಗಾರರಿಗೆ ಮಾಹಿತಿ: ‘ರೇಷ್ಮೆ ಕೃಷಿ, ಹುಳುಗಳ ಸಾಕಣೆಗೆ ಆಸಕ್ತಿ ತೋರುವ ರೈತರಿಗೆ ರೇಷ್ಮೆ ತರಬೇತಿ ಸಂಸ್ಥೆಯಿಂದ ಅಗತ್ಯ ತರಬೇತಿ ನೀಡಲಾಗುತ್ತದೆ. ಜತೆಗೆ ರೇಷ್ಮೆ ಸಾಕಣೆ ಮನೆ ನಿರ್ಮಾಣಕ್ಕೆ ಸಿಗುವ ಸಹಾಯಧನ, ಹಿಪ್ಪುನೇರಳೆ ಸಸಿ ಬೆಳೆಸಲು ಸಿಗುವ ಪ್ರೋತ್ಸಾಹಧನದ ಬಗ್ಗೆಯೂ ಇಲಾಖೆಯಿಂದ ಮಾಹಿತಿ ನೀಡಲಾಗುತ್ತದೆ’ ಎನ್ನುತ್ತಾರೆ ಅವರು.
‘ರೇಷ್ಮೆ ಹುಳು ಸಾಕಣೆ ಮನೆ ನಿರ್ಮಾಣದ ಒಟ್ಟು ಘಟಕದ (ಒಂದು ಸಾವಿರ ಚದರ ಅಡಿ ವಿಸ್ತೀರ್ಣ) ವೆಚ್ಚ ₹4.5 ಲಕ್ಷ. ಇದರಲ್ಲಿ ಶೇ 75ರಷ್ಟು ಸಹಾಯಧನವನ್ನು ಇಲಾಖೆಯಿಂದ ನೀಡಲಾಗುತ್ತದೆ. ಇದರೊಂದಿಗೆ ಕನಿಷ್ಠ 1.5 ಎಕರೆ ಪ್ರದೇಶವು ಹಿಪ್ಪುನೇರಳೆ ಬೆಳೆ ಕ್ಷೇತ್ರ ಹೊಂದಿರಬೇಕು. ಕಡಿಮೆ ವೆಚ್ಚದ ಶೆಡ್ ನಿರ್ಮಾಣಕ್ಕೂ ಅಗತ್ಯ ಸಹಾಯಧನ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ರೇಷ್ಮೆ ಕೃಷಿಯಿಂದ ಉತ್ತಮ ಆದಾಯ ಗಳಿಸಬಹುದು. ರೇಷ್ಮೆ ಅಭಿವೃದ್ಧಿಗೆ ಸರ್ಕಾರದಿಂದ ನೆರವು ನೀಡಲಾಗುತ್ತಿದ್ದು ರೈತರು ಇದರ ಉಪಯೋಗ ಪಡೆದುಕೊಳ್ಳಬಹುದು.ಕೆ.ಎಚ್.ಪೂಜಾರ ಪ್ರಭಾರಿ ಉಪ ನಿರ್ದೇಶಕ ರೇಷ್ಮೆ ಇಲಾಖೆ ಧಾರವಾಡ.
ಉಪ್ಪಿನಬೆಟೆಗೇರಿಯಲ್ಲಿ ಕೆಲ ರೈತರು ಶೇಡ್‌ನಲ್ಲಿ ರೇಷ್ಮೆ ಹುಳು ಸಾಕಣೆ ಮಾಡುತ್ತಿದ್ದರು. ಗೂಡುಗಳಿಂದ ಉತ್ತಮ ಲಾಭ ಬಂದ ಹಿನ್ನೆಲೆಯಲ್ಲಿ ಅವರು ನಾಲ್ಕು ಎಕರೆಯಲ್ಲಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಕೃಷಿ ಮಾಡುತ್ತಿದ್ಧಾರೆಬಸವರಾಜಯ್ಯ ರೇಷ್ಮೆ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.